ಕಾರಿಂಜೇಶ್ವರ ಗಣಿಗಾರಿಕೆ ನಿಲ್ಲಿಸಲು ಕ್ರಮಕೈಗೊಳ್ಳಿ: ಸಚಿವ ಹಾಲಪ್ಪಗೆ ಪೇಜಾವರಶ್ರೀ ಸೂಚನೆ

ಉಡುಪಿ, ಜ.28: ಶುಕ್ರವಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಭೇಟಿ ಯಲ್ಲಿರುವ ರಾಜ್ಯ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ತೀರ್ಥಕ್ಷೇತ್ರ ನರಹರಿ ಪರ್ವತದ ಶ್ರೀಕಾರಿಂಜೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕ್ಷೇತ್ರದ ಪಾವಿತ್ರಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳನ್ನು ಸಚಿವರಿಗೆ ವಿವರಿಸಿದ ಪೇಜಾವರಶ್ರೀಗಳು, ಈ ಬಗ್ಗೆ ವಿಶೇಷ ಮುತವರ್ಜಿ ವಹಿಸಿ ಅಲ್ಲಿ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸುವಂತೆ ಹಾಗೂ ಅದನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಲಿಖಿತ ಅಪೇಕ್ಷೆ ಸಲ್ಲಿಸಿದರು.
ಪೇಜಾವರಶ್ರೀಗಳ ಮನವಿಗೆ ಕೂಡಲೇ ಸ್ಪಂದಿಸಿದ ಸಚಿವ ಹಾಲಪ್ಪ ಆಚಾರ್, ಕೂಡಲೇ ಈ ವಿಚಾರದಲ್ಲಿ ಮಂಗಳೂರು ಜಿಲ್ಲಾಧಿಕಾರಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ.ಪಂಕಜ್‌ಕುಮಾರ್ ಪಾಂಡೆ, ನಿರ್ದೇಶಕ ರಾಮ್‌ಪ್ರಸಾದ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ನಂದನ್‌ಕುಮಾರ್ ಉಪಸ್ಥಿತರಿದ್ದರು.
ಶ್ರೀಕೃಷ್ಣ ಮಠಕ್ಕೆ ಭೇಟಿ: ಇದೇ ವೇಳೆ ಸಚಿವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ, ಮುಖ್ಯ ಪ್ರಾಣರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥರಿಂದ ಅನುಗ್ರಹ ಪ್ರಸಾದ ಪಡೆದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖಾ ಮುಖ್ಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಇಲಾಖೆಯ ನಿರ್ದೇಶಕ ರಾಮ ಮನೋಹರ ಪ್ರಸಾದ್, ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್, ಜಿಪಂ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ ಭಟ್, ಸಚಿವರ ಪತ್ನಿ ಹಾಗೂ ಆಪ್ತ ಕಾರ್ಯದರ್ಶಿ ಡಾ.ನಂದನ್ ಕುಮಾರ್ ಉಪಸ್ಥಿತರಿದ್ದರು.