ರಾಯಚೂರು ನ್ಯಾಯಾಧೀಶರ ವಿರುದ್ಧ ಉಡುಪಿ ಠಾಣೆಗೆ ದೂರು
ಉಡುಪಿ, ಜ.28: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರ ಭಾವಚಿತ್ರವನ್ನು ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಧ್ವಜಾರೋಹಣ ಸ್ಥಳದಿಂದ ಸಕಾರಣವಿಲ್ಲದೆ ತೆರವುಗೊಳಿಸಿ ಅಪಮಾನ ಮಾಡಿ ರುವುದಾಗಿ ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ಸಂಚಾಲಕ ಸುಂದರ್ ಮಾಸ್ತರ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಸಮಾಜದ ಸ್ವಾಸ್ಥ, ಗೌರವ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯ ಬೇಕಾದ ನ್ಯಾಯಾಧೀಶರ ಈ ರೀತಿ ನಡವಳಿಕೆ ನಮ್ಮ ಸಮುದಾಯಕ್ಕೆ ಆತಂಕ ದೊಂದಿಗೆ ನೋವು ತಂದಿದೆ. ಆದುದರಿಂದ ಮಲ್ಲಿಕಾರ್ಜುನ ಗೌಡ ವಿರುದ್ಧ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ಕಾಯಿದೆ 1989ರ ತಿದ್ದುಪಡಿ ಅಧಿನಿಮಯ 2015ರ ಕಲಂ 3(1)(ಟಿ),3(1)(ಯು), 3(1)(ವಿ) ಹಾಗೂ ದಂಡ ಸಂಹಿತೆ ಕಲಂ 124(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಸುಂದರ್ ಮಾಸ್ತರ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ದೂರು ಸ್ವೀಕರಿಸಿರುವ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಈ ದೂರಿನ ಕುರಿತು ಮೇಲಾಧಿಕಾರಿಗಳ ಜೊತೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರಗಿಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದಾರೆ.