ವಿಮಾನ ನಿಲ್ದಾಣ ಭದ್ರತೆಗೆ ಆದ್ಯತೆ ನೀಡಲು ಬಿಸಿಎಎಸ್ ಡಿಜಿ ಸೂಚನೆ

ಮಂಗಳೂರು, ಜ.28: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಗೆ ಹೆಚ್ಚು ಆದ್ಯತೆ ನೀಡಬೇಕು. ಅದಕ್ಕಾಗಿ ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಡೈರೆಕ್ಟರ್ ಜನರಲ್ ಜೈದೀಪ್ ಪ್ರಸಾದ್ ಸೂಚಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಭದ್ರತಾ ವಿಚಾರಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಕಾರ್ಗೋ ವ್ಯವಸ್ಥೆಯಲ್ಲಿ ಹೆಚ್ಚು ಭದ್ರತೆಗೆ ಗಮನ ನೀಡಿದೆ. ಮುಂದೆ ಯಾವುದೇ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ವಿಮಾನ ನಿಲ್ದಾಣದ ಮುಖ್ಯ ಅಧಿಕಾರಿ ನೀರವ್ ಶಾ ವಿಮಾನ ನಿಲ್ದಾಣದ ಧ್ಯೇಯ ಹಾಗು ಉದ್ದೇಶಗಳನ್ನು ವಿವರಿಸಿದರು. ಬ್ಯೂರೋ ಆಫ್ ಸಿವಿಲ್ ಏವಿಯೇಷನ್‌ನ ಜಂಟಿ ನಿರ್ದೇಶಕ ರಾಜೀವ್ ಕುಮಾರ್ ರೈ ಸ್ವಾಗತಿಸಿದರು. ಕೃಷ್ಣ ಪ್ರಕಾಶ್ ವಂದಿಸಿದರು. ಬಳಿಕ ಜೈದೀಪ್ ಪ್ರಸಾದ್ ವಿಮಾನ ನಿಲ್ದಾಣದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಭದ್ರತಾ ವಿಭಾಗದ ಮುಖ್ಯಸ್ಥ ಮೌನೇಶ್ ಕೆ.ಜಿ. ಉಪಸ್ಥಿತರಿದ್ದರು.





