ಸಿ.ಎಂ. ಇಬ್ರಾಹೀಂಗೆ ರಾಜ್ಯಸಭಾ ಸ್ಥಾನ ತಪ್ಪಿಸಿದ್ದೇ ದೇವೇಗೌಡರು : ಸಿದ್ದರಾಮಯ್ಯ ಆರೋಪ

ಬೆಂಗಳೂರು, ಜ.28: ರಾಜ್ಯದ ಜನರ ಆಶೀರ್ವಾದ ಇರುವವರೆಗೆ ಯಾರೂ ತಬ್ಬಲಿಯಾಗಲ್ಲ, ಅದು ಇಬ್ರಾಹೀಂ ಆದರೂ ಅಷ್ಟೇ, ನಾನೇ ಆದರೂ ಅಷ್ಟೆ. ಜನರ ಪ್ರೀತಿ ವಿಶ್ವಾಸ ಮಾತ್ರ ಮುಖ್ಯ. ನನ್ನ ಪ್ರಕಾರ ಸಿ.ಎಂ.ಇಬ್ರಾಹೀಂ ಪಕ್ಷ ತೊರೆಯಲ್ಲ, ಜೆಡಿಎಸ್‌ಗೆ ಹೋಗಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇಬ್ರಾಹೀಂಗೆ ರಾಜ್ಯಸಭಾ ಸ್ಥಾನವನ್ನು ತಪ್ಪಿಸಿದ್ದೇ ದೇವೇಗೌಡರು. ಹಾಗಾಗಿ ಅವರು ಮತ್ತೆ ಜೆಡಿಎಸ್‌ಗೆ ಹೋಗಲ್ಲ ಎಂದು ನನಗನಿಸುತ್ತಿದೆ. ಇಬ್ರಾಹೀಂ ಕೋಪದಲ್ಲಿ ಕಾಂಗ್ರೆಸ್ ಬಿಡುತ್ತೇನೆ ಎಂದಿರಬಹುದು, ನಾನು ಅವರ ಜೊತೆ ಮಾತನಾಡುತ್ತೇನೆ ಎಂದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಅವರಿಗೂ ಗೊತ್ತಿದೆ. ನನಗೆ ಬಾದಾಮಿಯಿಂದ ಸ್ಪರ್ಧೆ ಮಾಡಿ ಎಂದು ಹೇಳಿದವರಲ್ಲಿ ಇಬ್ರಾಹೀಂ ಕೂಡ ಒಬ್ಬರು. ಅವರು ನನಗೆ ಒಳ್ಳೆ ಸ್ನೇಹಿತ, ನನ್ನ ಬಗ್ಗೆ ಏನೇ ಹೇಳಿದ್ರೂ ಅದು ನನಗೆ ಶುಭ ಹಾರೈಸಿದ ಹಾಗೆ ಅನ್ಕೊತೀನಿ ಎಂದು ಸಿದ್ದರಾಮಯ್ಯ ಹೇಳಿದರು.
ಆರೆಸೆಸ್ಸ್ ಹಿನ್ನೆಲೆಯಿಂದ ಬಂದ ಸಚಿವ ಸುನೀಲ್ ಕುಮಾರ್ ಕಾರ್ಕಳ ಅವರಿಂದ ಇನ್ನೇನು ನಿರೀಕ್ಷೆ ಮಾಡಬಹುದು? ಅವರು ಸಮಾಜ ಒಡೆಯುವವರು. ಹಿಂದೂ ಬೇರೆ, ಹಿಂದುತ್ವ ಬೇರೆ. ನಾವು ಹಿಂದೂಗಳು ಒಟ್ಟಿಗೆ ಬಾಳಲು ಕರೆ ಕೊಟ್ಟರೆ, ಅವರು ಹಿಂದುತ್ವದ ಹೆಸರಲ್ಲಿ ಸಮಾಜ ಒಡೆಯುವವರು. 2013ರಲ್ಲಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷ ಏಳು ಸ್ಥಾನ ಗೆದ್ದಿತ್ತು, ಬಿಜೆಪಿ ಒಂದೇ ಗೆದ್ದಿತ್ತು. ಯಾವುದು ಯಾರ ಭದ್ರ ಕೋಟೆನೂ ಅಲ್ಲ ಎಂದು ಅವರು ತಿರುಗೇಟು ನೀಡಿದರು.
ಈ ಸರಕಾರದ ಸಚಿವರು, ಶಾಸಕರು ತಾವೇ ಮಾಡಿದ ಕೋವಿಡ್ ನಿಯಮಗಳನ್ನು ಮೀರುತ್ತಿದ್ದಾರೆ. ಇವರಿಗೆ ನಿಯಮಗಳು ಅನ್ವಯಿಸಲ್ವ? ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
''ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡುತ್ತೇವೆ. ಸಂವಿಧಾನ ರಚನೆ ಮಾಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅವರ ಫೋಟೊವನ್ನು ತೆಗೀರಿ ಎಂದು ನ್ಯಾಯಾಧೀಶರು ಹೇಳಿರುವುದು ಅಕ್ಷಮ್ಯ ಅಪರಾಧ. ಅವರ ಮೇಲೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಕ್ರಮ ಕೈಗೊಳ್ಳಬೇಕು''.
-ಸಿದ್ದರಾಮಯ್ಯ, ವಿಪಕ್ಷ ನಾಯಕ







