ದೇಶದಲ್ಲಿ ಒಂದೇ ದಿನ 600 ಕೋವಿಡ್ ಸೋಂಕಿತರು ಮೃತ್ಯು

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಒಂದೇ ದಿನ 100ಕ್ಕಿಂತ ಅಧಿಕ ಹಾಗೂ ಕೇರಳದಲ್ಲಿ 90ಕ್ಕಿಂತ ಅಧಿಕ ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದು, ದೇಶದಲ್ಲಿ ಒಂದೇ ದಿನ ಈ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ ಮೂರನೇ ಅಲೆಯಲ್ಲಿ ಮೊದಲ ಬಾರಿಗೆ 600ನ್ನು ದಾಟಿದೆ.
ದೇಶದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಶುಕ್ರವಾರ 2,35,396 ಪ್ರಕರಣಗಳು ವರದಿಯಾಗಿದ್ದು, ಇದು 11 ದಿನಗಳಲ್ಲೇ ಕನಿಷ್ಠ. ಒಂದು ರಾಜ್ಯದ ಅಂಕಿ ಅಂಶ ಮಾತ್ರ ಇನ್ನೂ ಬರಬೇಕಿದೆ.
ಶುಕ್ರವಾರ ದೇಶದಲ್ಲಿ 602 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದು ಐದು ತಿಂಗಳಲ್ಲೇ ಗರಿಷ್ಠ ಸಾವಿನ ಸಂಖ್ಯೆಯಾಗಿದೆ. 2021ರ ಆಗಸ್ಟ್ 25ರಂದು 603 ಮಂದಿ ಮೃತಪಟ್ಟಿದ್ದರು. ದೇಶದಲ್ಲಿ ನಾಲ್ಕು ದಿನಗಳಲ್ಲಿ ಮೂರನೇ ಬಾರಿ 500ಕ್ಕೂ ಅಧಿಕ ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮೂರನೇ ಅಲೆಯಲ್ಲಿ ಮೊದಲ ಬಾರಿಗೆ 103 ಸಾವು ದಾಖಲಾಗಿದೆ. ಇದು ಕಳೆದ ವರ್ಷದ ಸೆಪ್ಟೆಂಬರ್ 1ರ ಬಳಿಕ ಗರಿಷ್ಠ ಸಂಖ್ಯೆಯಾಗಿದೆ. ಪುಣೆ ವೃತ್ತದಲ್ಲಿ 40 ಹಾಗೂ ಮುಂಬೈನಲ್ಲಿ 30 ಸಾವು ವರದಿಯಾಗಿದೆ. ರಾಜ್ಯದಲ್ಲಿ ಈ ತಿಂಗಳು 935 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದು ದೇಶದಲ್ಲೇ ಗರಿಷ್ಠ.
ಉಳಿದಂತೆ ಕೇರಳ (895), ಬಂಗಾಳ (751), ತಮಿಳುನಾಡು (684) ಮತ್ತು ದೆಹಲಿ (662) ನಂತರದ ಸ್ಥಾನಗಳಲ್ಲಿವೆ. ಕೇರಳದಲ್ಲಿ 94 ಮಂದಿ ಶುಕ್ರವಾರ ಸೋಂಕಿಗೆ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ 50 ಮಂದಿ ಮೃತಪಟ್ಟಿದ್ದು, ಇದು ಮೂರನೇ ಅಲೆಯಲ್ಲಿ ಎರಡನೇ ಗರಿಷ್ಠ ಸಂಖ್ಯೆಯಾಗಿದೆ.
ಗುಜರಾತ್‌ನಲ್ಲೀ ಮೂರನೇ ಅಲೆಯಲ್ಲೇ ಗರಿಷ್ಠ ಅಂದರೆ 30 ಸಾವು ಶುಕ್ರವಾರ ವರದಿಯಾಗಿದೆ. ಗೋವಾದಲ್ಲಿ 20 ಮತ್ತು ಹರ್ಯಾಣದಲ್ಲಿ 19 ಮಂದಿ ಸಾವಿಗೀಡಾಗಿದ್ದಾರೆ. ಆಂಧ್ರ (12), ಮೇಘಾಲಯ (6), ಪುದುಚೇರಿ (5) ಕೂಡಾ ಈ ಅಲೆಯಲ್ಲಿ ಗರಿಷ್ಠ ಸಾವಿನ ಸಂಖ್ಯೆಯನ್ನು ಶುಕ್ರವಾರ ದಾಖಲಿಸಿವೆ. ದೆಹಲಿಯಲ್ಲಿ 11 ದಿನಗಳಲ್ಲೇ ಕನಿಷ್ಠ ಎನಿಸಿದ 25 ಸಾವು ಸಂಭವಿಸಿದೆ.
54,537 ಹೊಸ ಸೋಂಕು ಪ್ರಕರಣಗಳನ್ನು ದಾಖಲಿಸಿದ ಕೇರಳ ಹೊರತುಪಡಿಸಿದರೆ ಉಳಿದೆಲ್ಲ ದೊಡ್ಡ ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಮಹಾರಾಷ್ಟ್ರದಲ್ಲಿ 24948 ಪ್ರಕರಣ ವರದಿಯಾಗಿದ್ದು, ಜನವರಿ 4ರ ಬಳಿಕ ಇದು ಕನಿಷ್ಠ ಸಂಖ್ಯೆಯಾಗಿದೆ. ಕರ್ನಾಟಕದಲ್ಲಿ 31198 ಪ್ರಕರಣಗಳು ವರದಿಯಾಗಿದ್ದು, ಇದು ಗುರುವಾರ ದಾಖಲಾದ 38083ಕ್ಕಿಂತ ಕಡಿಮೆ







