7 ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿಯ ಶೇ 69.37ರಷ್ಟು ಆಸ್ತಿ ಹೊಂದಿರುವ ಬಿಜೆಪಿ : ಎಡಿಆರ್ ವರದಿ

ಹೊಸದಿಲ್ಲಿ: ಬಿಜೆಪಿ ಆರ್ಥಿಕ ವರ್ಷ 2019-20ರಲ್ಲಿ ರೂ 4,847.78 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ತಿಳಿಸಿದೆ. ಬಿಜೆಪಿಯ ಒಟ್ಟು ಆಸ್ತಿ ಇತರ ಎಲ್ಲಾ ಏಳು ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿಯ ಶೇ 69.37ರಷ್ಟಾಗಿದೆ.
ಬಿಜೆಪಿಯು ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದ್ದರೆ ನಂತರದ ಸ್ಥಾನದಲ್ಲಿ ಬಹುಜನ್ ಸಮಾಜ ಪಕ್ಷ (ರೂ 698.33 ಕೋಟಿ) ಮತ್ತು ಕಾಂಗ್ರೆಸ್ (ರೂ 588.16 ಕೋಟಿ) ಇವೆ.
ಏಳು ರಾಷ್ಟ್ರೀಯ ಪಕ್ಷಗಳು (ಬಿಜೆಪಿ, ಬಿಎಸ್‍ಪಿ, ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ತೃಣಮೂಲ ಕಾಂಗ್ರೆಸ್ ಮತ್ತು ಎನ್‍ಸಿಪಿ) ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿರುವ ತಮ್ಮ ಆಸ್ತಿಗಳ ಆಧಾರದಲ್ಲಿ ಎಡಿಆರ್ ತನ್ನ ವರದಿ ಹೊರತಂದಿದೆ.
ಬಿಜೆಪಿಯು ಆರ್ಥಿಕ ವರ್ಷ 2019-20ರಲ್ಲಿ ರೂ 3,253 ಕೋಟಿ ನಿರಖು ಠೇವಣಿಯಿರಿಸಿದ್ದರೆ, ಬಿಎಸ್‍ಪಿ ರೂ 618.86 ಕೋಟಿ ಮತ್ತು ಕಾಂಗ್ರೆಸ್ ರೂ 240.90 ಕೋಟಿ ಠೇವಣಿಯಿರಿಸಿವೆ.
ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷದ ಒಟ್ಟು ಆಸ್ತಿ ಮೌಲ್ಯ ರೂ 563.47 ಕೋಟಿ ಆಗಿದ್ದರೆ, ತೆಲಂಗಾಣ ರಾಷ್ಟ್ರ ಸಮಿತಿಯ ಆಸ್ತಿ ಮೌಲ್ಯ ರೂ 301.47 ಕೋಟಿ ಮತ್ತು ಎಐಎಡಿಎಂಕೆಯ ಒಟ್ಟು ಆಸ್ತಿ ರೂ 267.61 ಕೋಟಿ ಆಗಿದೆ ಎಂದು ವರದಿ ಹೇಳಿದೆ.







