''ಸಿದ್ದರಾಮಯ್ಯ- ಸಿಎಂ ಇಬ್ರಾಹಿಂ ಅವಳಿ -ಜವಳಿ ಇದ್ದ ಹಾಗೆ'': ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ, ಜ.29: ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಹೆಸರೇ ಸಿಎಂ ಇಬ್ರಾಹಿಂ ಮತ್ತು ಸಿದ್ದರಾಮಯ್ಯ ಆಗಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಿಎಂ ಇಬ್ರಾಹಿಂ ಮತ್ತು ಸಿದ್ದರಾಮಯ್ಯ ಇವರಿಬ್ಬರು ಬೇರೆ ಬೇರೆ ಅಲ್ಲ. ಒಂದು ರೀತಿಯ ಅವಳಿ -ಜವಳಿ ಇದ್ದ ಹಾಗೆ ಇಬ್ಬರಿಗೂ ಅಧಿಕಾರದ ಆಸೆ. ರಾಜ್ಯಾಧ್ಯಕ್ಷ ಸ್ಥಾನ ತಪ್ಪಿ ಹೋದರೆ ಅಥವಾ ಯಾವುದೇ ಅಧಿಕಾರ ಸಿಗದಿದ್ದರೆ ಇಬ್ಬರೂ ಪಕ್ಷ ಬಿಡುವ ಮಾತನಾಡುತ್ತಾರೆ. ಹಾಗಾಗಿ ಈ ಅವಕಾಶವಾದಿಗಳ ಬಗ್ಗೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ'' ಎಂದರು.
''ಜಿ.ಪಂ-ತಾ.ಪಂ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಿಪಂ ಮತ್ತು ತಾಪಂ ಚುನಾವಣೆಯನ್ನು ಆದಷ್ಟು ಬೇಗ ನಡೆಸಲಾಗುವುದು'' ಎಂದು ತಿಳಿಸಿದರು.
ಜಿಪಂ, ತಾಪಂ ಚುನಾವಣೆ ಆದಷ್ಟು ಬೇಗ ನಡೆಸುವಂತೆ ಚುನಾವಣಾ ಆಯೋಗಕ್ಕೆ ಈಗಾಗಲೇ ನಾವು ಮನವಿ ಕೊಟ್ಟಿದ್ದೇವೆ. ಚುನಾವಣಾ ಆಯೋಗ ಈ ಬಗ್ಗೆ ಚಿಂತನೆ ನಡೆಸಿದೆ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ 780 ಕ್ಕೂ ಹೆಚ್ಚು ತಕರಾರು ಅರ್ಜಿಗಳು ಬಂದಿದ್ದರಿಂದ ಅವುಗಳನ್ನು ಪರಿಶೀಲಿಸಿ ಕೆಲವು ನಿಯಮಗಳಿಗೆ ತಿದ್ದುಪಡಿ ತಂದು ಚುನಾವಣೆ ನಡೆಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಲಕ್ಷ್ಮಿನಾರಾಯಣ ನೇತೃತ್ವದ ಸಮಿತಿ ರಚಿಸಲಾಗಿದೆ. ಸಮಿತಿಯು ಎಲ್ಲಾ ಕೋನಗಳಲ್ಲಿ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ವರದಿ ಬಂದ ನಂತರ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದರು.







