ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅವ್ಯವಹಾರ ಪ್ರಕರಣ: ವಿಚಾರಣೆಗೆ ಹಿರಿಯ ಅಧಿಕಾರಿ ಎಸ್.ಮುರುಗನ್ ನೇಮಕ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
ಬೆಂಗಳೂರು, ಜ. 29: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ತನಿಖೆ ನಡೆಸಿ, ತುರ್ತಾಗಿ ವರದಿ ಸಲ್ಲಿಸಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಸ್. ಮುರುಗನ್ ಅವರನ್ನು ವಿಚಾರಣಾ ಅಧಿಕಾರಿಯಾಗಿ ನೇಮಿಸಿ ಶನಿವಾರ ಒಳಾಡಳಿತ (ಗೃಹ)ಇಲಾಖೆ ಆದೇಶ ಹೊರಡಿಸಿದೆ.
ಈ ಸಂಬಂಧ ಒಳಾಡಳಿತ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಎಸ್.ಸುರೇಶ್ ಬಾಬು ಆದೇಶ ಹೊರಡಿಸಿದ್ದು, `ದೃಶ್ಯ ಮಾಧ್ಯಮಗಳಲ್ಲಿ ಪುಸಾರವಾದ ವಿಡಿಯೋ ಯಾವ ರೀತಿ ಕಾರಾಗೃಹದಲ್ಲಿ ಚಿತ್ರೀಕರಣವಾಯಿತು ಹಾಗೂ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ, ಸಮಗ್ರವಾಗಿ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸಹಾಯಕರಾಗಿ ಎಂ. ಸೋಮಶೇಖರ್, ಕಾರಾಗೃಹಗಳ ಉಪ ಮಹಾನಿರೀಕ್ಷಕರು, ಉತ್ತರ ವಲಯ, ಬೆಳಗಾವಿ ಇವರನ್ನು ನೇಮಿಸಿ ಆದೇಶಿಸಲಾಗಿದೆ.
ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ ಹಾಗೂ ಪೊಲೀಸ್ ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆ ಅವರೊಂದಿಗೆ ಜ.27ರಂದು ನಡೆದ ಸಭೆಯಲ್ಲಿ ಚರ್ಚಿಸಿ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಂದ ಉನ್ನತ ಮಟ್ಟದ ವಿಚಾರಣೆಯನ್ನು ನಡೆಸಲು ತೀರ್ಮಾನಿಸಲಾಗಿದೆ.
ಅದರನ್ವಯ ವಿಚಾರಣಾಧಿಕಾರಿಗಳು ಅಂತಿಮ ವರದಿಯನ್ನು ಹಾಗೂ ವಿಚಾರಣೆಯ ಪ್ರಗತಿಯ ಪ್ರತಿಯೊಂದು ಹಂತದ ಬಗ್ಗೆ ಮಾಹಿತಿಯನ್ನು ಕಾಲಕಾಲಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆ ಅವರಿಗೆ ನೇರವಾಗಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.







