ಬಿಜೆಪಿ ಸರಕಾರದಿಂದ ಹಗಲು ದರೋಡೆ: ಶಾಸಕ ಯು.ಟಿ. ಖಾದರ್ ಆರೋಪ

ಮಂಗಳೂರು, ಜ. 29: ಜನ ಸಾಮಾನ್ಯರಿಗೆ ಯಾವುದೇ ಮಾಹಿತಿಯನ್ನು ನೀಡದೆ ಜನರನ್ನು ಕತ್ತಲಲ್ಲಿಟ್ಟು ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡುವ ಮೂಲಕ ಕಿಸೆಗಳ್ಳತನದೊಂದಿಗೆ ಹಗಲು ದರೋಡೆ ಮಾಡುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಆರೋಪ ಮಾಡಿದ ಅವರು, ನರಿಂಗಾನದಿಂದ ಮಂಗಳೂರಿಗೆ ಪ್ರಯಾಣದರವಾಗಿದ್ದ 16 ರೂ.ಗಳಿಂದ 23 ರೂ.ಗಳಿಗೆ, ದೇರಳಕಟ್ಟೆಯಿಂದ ಮಂಗಳೂರಿಗೆ 13 ರೂ.ಗಳಿದ್ದ ದರವನ್ನು 20 ರೂ.ಗಳಿಗೆ ಯಾವುದೇ ಮಾಹಿತಿ ನೀಡದೆ ಏರಿಕೆ ಮಾಡಲಾಗಿದೆ ಎಂದರು.
ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡಿ ಜನರಿಂದ ತಿರಸ್ಕರಿಸ್ಪಡುವ ಭಯ ಎದುರಾದಾಗ ಅದನ್ನು ಎದುರಿಸಲಾಗದೆ ಮಾಹಿತಿಯನ್ನೇ ನೀಡದೆ ಈ ರೀತಿ ಹಗಲುದರೋಡೆಗೆ ಬಿಜೆಪಿ ಸರಕಾರ ಹೊರಟಿದೆ. ಜನರು ಸುಮ್ಮನಿದ್ದಾರೆ ಎಂದು ದಬ್ಬಾಳಿಕೆ ಮಾಡುವುದೇ ಎಂದು ಖಾದರ್ ಪ್ರಶ್ನಿಸಿದರು.
ಬಿಜೆಪಿ ಜನರಿಂದ ತಿರಸ್ಕರಿಸಲ್ಪಡುತ್ತಿರುವ ಪಕ್ಷ
ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಅದರಿಂದಾಗಿಯೇ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸಂದರ್ಭ ಐದು ವರ್ಷಗಳ ಅವಧಿಗೆ ಒಬ್ಬ ಮುಖ್ಯಮಂತ್ರಿಯ ಮೂಲಕ ರಾಜ್ಯದಲ್ಲಿ ಸ್ಥಿರ ಆಡಳಿತ ನೀಡಲು ಸಾಧ್ಯವಾಗಿದೆ. ಆದರೆ ಬಿಜೆಪಿ ಜನರಿಂದ ತಿರಸ್ಕರಿಸಲ್ಪಡುತ್ತಿರುವ ಪಕ್ಷವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಬಿಜೆಪಿಯವರಿಗೆ ಸ್ಥಿರ ಇಲ್ಲ. ಇನ್ನು ಅವರು ಸ್ಥಿರ ಸರಕಾರ ನೀಡಲು ಹೇಗೆ ಸಾಧ್ಯ. ಪ್ರತಿಪಕ್ಷದಲ್ಲಿರುವ ಕಾಂಗ್ರೆಸ್‌ನಲ್ಲಿ ಗೊಂದಲ ಇದೆ ಎಂದು ಹೇಳುವುದರಲ್ಲೇನಿದೆ. ಆಡಳಿತ ನಡೆಸುತ್ತಿರುವವರು ಬಿಜೆಪಿಯವರು. ಜನತೆ ಅವರಿಗೆ ಅವಕಾಶ ನೀಡಿದ್ದಾರೆ. ಆದರೆ ಅವರಲ್ಲಿ ಒಗ್ಗಟ್ಟು ಇದ್ದಿದ್ದರೆ ಯಡಿಯೂರಪ್ಪನವರನ್ನು ಯಾಕೆ ಬದಲಿಸುತ್ತಿದ್ದರು. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಜನರು ತಮ್ಮ ಕೆಲಸದ ಬಗ್ಗೆ ಚಿಂತಿತರಾಗಿದ್ದು, ಸರಕಾರ ಜನರ ಬಗ್ಗೆ ಆಲೋಚನೆ ಮಾಡುತ್ತಿತ್ತು. ಆದರೆ ಬಿಜೆಪಿ ಸರಕಾರ ನಡೆಸುತ್ತಿರುವಾಗ ಜನ ಸರಕಾರದ ಬಗ್ಗೆ ಯಾವಾಗ ಸರಕಾರ ಬೀಳುತ್ತದೋ, ಯಾರು ಮುಖ್ಯಮಂತ್ರಿ ಸ್ಥಾನದಿಂದ ಹೋಗುತ್ತಾರೋ ಎಂದು ದಿನಾ ಆಲೋಚಿಸುವಂತಾಗಿದೆ. ಕಾಂಗ್ರೆಸ್‌ನದ್ದು ಒಂದೇ ಗುಂಪು ಎಂದು ಖಾದರ್ ಹೇಳಿದರು.