ಬಿಎಸ್ವೈ ಮೊಮ್ಮಗಳ ಆತ್ಮಹತ್ಯೆ ಪ್ರಕರಣ: ಹೈಗ್ರೌಂಡ್ಸ್ ಪೊಲೀಸರಿಂದ ತನಿಖೆ ಶುರು

ಡಾ.ಸೌಂದರ್ಯ-
ಬೆಂಗಳೂರು, ಜ.29: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಪ್ರಕರಣ ಸಂಬಂಧದ ತನಿಖೆಯನ್ನು ಹೈಗ್ರೌಂಡ್ಸ್ ಪೊಲೀಸರು ಆರಂಭಿಸಿದ್ದಾರೆ.
ಡಾ.ಸೌಂದರ್ಯ ಅವರು ಆತ್ಮಹತ್ಯೆ ಮಾಡಿಕೊಂಡ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಸಮೀಪದ ಡಾ.ನೀರಜ್ ಫ್ಲ್ಯಾಟ್ಗೆ ಭೇಟಿ ನೀಡಿದ ಪೊಲೀಸರು ಎಲ್ಲ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೂ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.
ಆರು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಸೌಂದರ್ಯ ಪ್ರಸವ ನಂತರ ಖಿನ್ನತೆಗೊಳಗಾಗಿದ್ದರು. ಸಾವಿರ ಮಂದಿಯಲ್ಲಿ ಒಬ್ಬರಿಗೆ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವೈದ್ಯರು ಕೂಡ ಇದೇ ವಿಚಾರವನ್ನು ಮೌಖಿಕವಾಗಿ ಉಲ್ಲೇಖಿಸಿದ್ದಾರೆ. ಈ ಹಿಂದೆಯೂ ಎರಡು-ಮೂರು ಬಾರಿ ಡಾ.ಸೌಂದರ್ಯ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಪತಿ ನೀರಜ್ ಹಾಗೂ ಸೌಂದರ್ಯ ನಡುವೆ ಯಾವುದೇ ಕಲಹವಿರಲಿಲ್ಲ. ವಿವಾಹವಾಗಿ ಫ್ಲ್ಯಾಟ್ಗೆ ಬಂದಾಗಿನಿಂದಲೂ ಅನ್ಯೋನ್ಯವಾಗಿಯೇ ಇದ್ದರು. ಶುಕ್ರವಾರ 10 ಗಂಟೆ ಸುಮಾರಿಗೆ ಬೆಡ್ ರೂಂ ಬಾಗಿಲು ತೆರೆಯದಿದ್ದಾಗ ಕೆಲಸಗಾರರು ಬಂದು ಮಾಹಿತಿ ನೀಡಿದರು. ಬಳಿಕ ಬಾಲ್ಕನಿಯ ಬಾಗಿಲು ಮೂಲಕ ಹೋಗಿ ನೋಡಿದಾಗ ನೇಣು ಬಿಗಿದುಕೊಂಡಿದ್ದು ಕಂಡು ಬಂದಿತ್ತು.







