ಚಿತ್ರನಟಿ ಮೇಲೆ ಅತ್ಯಾಚಾರ ಪ್ರಕರಣ: ನಿರ್ಮಾಪಕನಿಗೆ ನ್ಯಾಯಾಂಗ ಬಂಧನ

ಬೆಂಗಳೂರು, ಜ.29: ಚಲನಚಿತ್ರಗಳಲ್ಲಿ ಅವಕಾಶ ಕೊಡಿಸಿ ಮದುವೆ ಮಾಡಿಕೊಳ್ಳುವ ನಂಬಿಕೆ ಹುಟ್ಟಿಸಿ ನಿರಂತರ ಅತ್ಯಾಚಾರ ನಡೆಸಿದ ಆರೋಪದಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ತ ನಟಿಯೊಬ್ಬರು ನೀಡಿದ ದೂರಿನ ಅನ್ವಯ ಪೊಲೀಸರು ನಿರ್ಮಾಪಕ ಹರ್ಷವರ್ಧನ್ ಟಿ.ಜಿ.ಯನ್ನು ಬಂಧಿಸಿ, ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
‘ವಿಷನ್ 2023’ ಎಂಬ ಸಿನಿಮಾದ ನಾಯಕ ಕಮ್ ನಿರ್ಮಾಪಕ ಆಗಿರುವ ಹರ್ಷವರ್ಧನ್ ಟಿ.ಜಿ., ಕಳೆದ ಎರಡು ವರ್ಷಗಳಿಂದಲೂ ನನಗೆ ಚಿತ್ರರಂಗದಲ್ಲಿ ಅವಕಾಶ ಕೊಡಿಸುವುದಾಗಿ ವಂಚಿಸಿ ಅತ್ಯಾಚಾರ ನಡೆಸಿ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ನಟಿ ತಿಳಿಸಿದ್ದಾರೆ.
ಸಿನಿಮಾಗಳಲ್ಲಿ ಸಹನಟಿಯಾಗಿ ಪಾತ್ರ ಮಾಡುತ್ತಿದ್ದ ನಟಿಗೆ ಹರ್ಷವರ್ಧನ್ ಪ್ರೇಮದ ಬಲೆ ಬೀಸಿದ್ದರು. ನೀನೇ ನನ್ನ ಹೆಂಡತಿ ಎಂದು ಹೇಳಿ ನಂಬಿಸಿದ್ದರು. ಕಳೆದ 2 ವರ್ಷಗಳಿಂದ ನನ್ನನ್ನು ದೈಹಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ಮದುವೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿ ಮೋಸ ಮಾಡಿದ್ದಾರೆ. ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೆ, ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದರು ಎಂದು ಮಹಿಳೆ ದೂರು ನೀಡಿದ್ದಾರೆ.
ಈ ನಟಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹರ್ಷವರ್ಧನ್ ವಿರುದ್ಧ ಐಪಿಸಿ ಸೆಕ್ಷನ್ 417, 376, 504, 506 ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.







