ಉಡುಪಿ: ಅಂಬೇಡ್ಕರ್‌ಗೆ ಅಗೌರವ ಆರೋಪ: ನ್ಯಾಯಾಧೀಶರ ವಜಾಕ್ಕೆ ಆಗ್ರಹಿಸಿ ಪಂಜಿನ ಮೆರವಣಿಗೆ, ಶವಯಾತ್ರೆ

ಉಡುಪಿ, ಜ.29: ಸಂವಿಧಾನದ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ವಜಾಗೊಳಿಸಿ ದೇಶದ್ರೋಹದ ಅಪಾದನೆ ಮೇಲೆ ಬಂಧಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ನೇತೃತ್ವದಲ್ಲಿ ಶನಿವಾರ ಸಂಜೆ ನಗರದಲ್ಲಿ ಪಂಜಿನ ಮೆರವಣಿಗೆ ಹಾಗೂ ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಲಾಯಿತು.
ಉಡುಪಿಯ ಸಿಂಡಿಕೇಟ್ ಬ್ಯಾಂಕ್‌ನ ಟವರ್‌ನಲ್ಲಿ ಮೆರವಣಿಗೆಗೆ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮೆರವಣಿಗೆ ಕೆಎಂ ಮಾರ್ಗವಾಗಿ, ಹಳೆ ಡಯಾನ ಸರ್ಕಲ್, ಕೋರ್ಟ್‌ರಸ್ತೆ, ಜೋಡುಕಟ್ಟೆ ಮೂಲಕ ಅಜ್ಜರಕಾಡು ಹುತಾತ್ಮ ಸ್ಮಾರಕ ತನಕ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಜನಪರ ಹೋರಾಟಗಾರ ಜಯನ್ ಮಲ್ಪೆ, ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಈ ನ್ಯಾಯಾಧೀಶರು ಯಾವ ಸಂವಿಧಾನ ಓದಿ ನ್ಯಾಯಾಧೀಶರಾಗಿದ್ದಾರೆ? ಇವರ ಜಾತಿವಾದ, ಮನುವಾದ, ಕೋಮುವಾದ ಮನಸ್ಸಿನಿಂದ ಜನರಿಗೆ ನ್ಯಾಯ ಕೊಡಲು ಸಾಧ್ಯವೇ? ರಾಜ್ಯ ಸರಕಾರ ಹಾಗೂ ಹೈಕೋರ್ಟ್ ದಲಿತರ ತಾಳ್ಮೆಯನ್ನು ಪರೀಕ್ಷಿಸದೆ ಕೂಡಲೇ ಈ ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.
ನಾರಾಯಣಗುರುಗಳಿಗೆ ಆದ ಅವಮಾನವನ್ನು ಇಡೀ ರಾಜ್ಯ ಹಾಗೂ ವಿವಿಧ ರಾಜಕೀಯ ಪಕ್ಷಗಳು ಖಂಡಿಸಿವೆ. ಆದರೆ ಸಂವಿಧಾನ ಬರೆದ ಅಂಬೇಡ್ಕರ್ ಆದ ಅವಮಾನದ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಮೌನ ವಹಿಸಿವೆ. ಇವರೆಲ್ಲರು ಅಂಬೇಡ್ಕರ್‌ನನ್ನು ಕೇವಲ ಓಟು ಬ್ಯಾಂಕಿಗಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆ, ಮುಖಂಡರಾದ ದಯಾನಂದ ಕಪ್ಪೆಟ್ಟು, ಮಂಜುನಾಥ್ ಗಿಳಿಯಾರು, ಲೋಕೇಶ್ ಪಡುಬಿದ್ರಿ, ಗಣೇಶ್ ನೆರ್ಗಿ, ವಾಸುದೇವ ಮುದೂರು, ಯುವ ರಾಜ್, ಸಂಧ್ಯಾ, ರಾಜು ಬೆಟ್ಟಿನಮನೆ, ಶೇಖರ್ ಹೆಜ್ಮಾಡಿ, ಕ್ರೈಸ್ತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.