ಬೆಂಗಳೂರು: 3 ಕೋಟಿ ಮೌಲ್ಯದ ಮಾದಕವಸ್ತು ವಶ; ನೈಜೀರಿಯಾದ ಇಬ್ಬರ ಬಂಧನ

ಬೆಂಗಳೂರು, ಜ.29: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು, ಸೆಲಿಬ್ರಿಟಿಗಳು ಹಾಗೂ ಉದ್ಯಮಿಗಳಿಗೆ ಮಾದಕವಸ್ತು ಸರಬರಾಜು ಮಾಡುತ್ತಿದ್ದ ನೈಜೀರಿಯಾ ಮೂಲದ ಇಬ್ಬರು ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ, ಮೂರು ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ನೈಜೀರಿಯಾ ಮೂಲದ ಸಿಕ್ಟಸ್ ಉಚೇಕ್(30), ಚುಕುಬೆಮ್ ಹೆನ್ರಿ(34) ಎಂದು ಗುರುತಿಸಲಾಗಿದೆ. ಹೊರಮಾವಿನಲ್ಲಿರುವ ನ್ಯೂ ರಾಜಣ್ಣ ಬಡಾವಣೆಯಲ್ಲಿ ವಾಸಿಸುತ್ತಿದ್ದ ಆರೋಪಿಗಳು ಎಚ್‍ಬಿಆರ್ ಬಡಾವಣೆ 5ನೆ ಹಂತದಲ್ಲಿರುವ ಅಂಬೇಡ್ಕರ್ ಮೈದಾನದ ಬಳಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಮೂರು ಕೋಟಿ ರೂ. ಮೌಲ್ಯದ 1.5 ಕೆಜಿ ಎಂಡಿಎಂಎ ಕ್ರಿಸ್ಟಲ್, 120 ಗ್ರಾಂ ಎಂಡಿಎಂಎ ಕಪ್ಪು, ಎರಡು ಪ್ಲಾಸ್ಟಿಕ್ ಕ್ಯಾನ್‍ಗಳಲ್ಲಿ ತುಂಬಿಟ್ಟಿದ್ದ 16.5 ಕೆಜಿ ತೂಕದ ಎಂಡಿಎಂಎ ಮಿಕ್ಸ್ ವಾಟರ್, 300 ಗ್ರಾಂ ವೀಡ್ ಆಯಿಲ್ ಹಾಗೂ ಟಯೋಟ ಕೊರೋಲ ಕಾರು ವಶಪಡಿಸಿಕೊಳ್ಳಲಾಗಿದೆ.
ವಿದೇಶದಿಂದ ಮಾದಕವಸ್ತು ತರಿಸಿಕೊಂಡು ನಗರದ ಹಲವೆಡೆ ಸರಬರಾಜು ಮಾಡುತ್ತಿದ್ದರು. ಈ ಕುರಿತು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಶಂಕರ್ ಗುಳೇದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.







