ಬಾಬಾ ಬುಡಾನ್ಗಿರಿ ವಿವಾದ: ಫೆ.7ಕ್ಕೆ ಸಚಿವ ಸಂಪುಟ ಉಪಸಮಿತಿಯಿಂದ ಸಾರ್ವಜನಿಕ ವಿಚಾರಣೆ ಸಭೆ

ಫೈಲ್ ಚಿತ್ರ
ಚಿಕ್ಕಮಗಳೂರು, ಜ.29: ತಾಲೂಕಿನ ಐ.ಡಿ.ಪೀಠ ಗ್ರಾಮದಲ್ಲಿರುವ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಅಧಿಸೂಚಿತ ಸಂಸ್ಥೆಗೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ಹಿಂದಿನ ಸರಕಾರದ ವರದಿಯನ್ನು ರದ್ದು ಪಡಿಸಿ ವಿವಾದ ಸಂಬಂಧ ಹೊಸದಾಗಿ ವರದಿ ಸಲ್ಲಿಕೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಚಿವ ಸಂಪುಟದ ಉಪ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿಯು ಫೆ.7ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣೆ ಸಭೆ ನಡೆಸಲಿದೆ ಎಂದು ಕಂದಾಯ ಇಲಾಖೆ (ಮುಜರಾಯಿ) ಅಧೀನ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕಾನೂನು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿಯು ಫೆ.7ರಂದು ಬೆಳಗ್ಗೆ 10:30ಕ್ಕೆ ಡಿಸಿ ಕಚೇರಿ ಸಭಾಂಗಣದಲ್ಲಿ ಬಾಬಾಬುಡನ್ಗಿರಿ ವಿವಾದ ಸಂಬಂಧ ಸಾರ್ವಜನಿಕರ ಅಹವಾಲು, ವಿಚಾರಣೆ ನಡೆಸಲಿದೆ. ಆಸಕ್ತ ಸಾರ್ವಜನಿಕರು ಕೋವಿಡ್-19ರ ನಿಯಮಗಳನ್ನು ಪಾಲಿಸಿ, ಈ ವಿಚಾರಣೆಯಲ್ಲಿ ಭಾಗವಹಿಸಿ ಸಾಕ್ಷಾಧಾರಗಳೊಂದಿಗೆ ಸಲಹೆ/ಆಕ್ಷೇಪಣೆ/ಹೇಳಿಕೆಗಳನ್ನು ಸಲ್ಲಿಸುವುದಿದ್ದಲ್ಲಿ ಅದನ್ನು ಲಿಖತವಾಗಿ/ ಮೌಖಿಕವಾಗಿ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







