ʼಪೆಗಾಸಸ್ʼ ಕುರಿತು ಕೇಂದ್ರ ಸರಕಾರ ನ್ಯಾಯಾಲಯ, ಸಂಸತ್ತಿಗೆ ಸುಳ್ಳು ಹೇಳಿದೆ, ಇದು ದೇಶದ್ರೋಹ: ಕಾಂಗ್ರೆಸ್ ವಾಗ್ದಾಳಿ

ರಣದೀಪ್ ಸುರ್ಜೆವಾಲಾ
ಹೊಸದಿಲ್ಲಿ,ಜ.29: ಭಾರತವು 2017ರಲ್ಲಿ ಇಸ್ರೇಲ್ ಜೊತೆಗಿನ ಎರಡು ಶತಕೋಟಿ ಡಾ.ಗಳ ಒಪ್ಪಂದದ ಭಾಗವಾಗಿ ಎನ್ಎಸ್ಒದ ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಿತ್ತು ಎನ್ನುವುದನ್ನು ಬಹಿರಂಗಗೊಳಿಸಿರುವ ದಿ ನ್ಯೂಯಾರ್ಕ್ ಟೈಮ್ಸ್ ನ ತನಿಖಾ ವರದಿಯು ಈ ಬೇಹುಗಾರಿಕೆ ತಂತ್ರಾಂಶದ ಕುರಿತು ವಿವಾದವು ಮತ್ತೊಮ್ಮೆ ಹೊತ್ತಿಕೊಳ್ಳುವಂತೆ ಮಾಡಿದೆ. ಭಾರತದಲ್ಲಿ ಸ್ಪೈವೇರ್ನ ಕಾನೂನುಬಾಹಿರ ಬಳಕೆಯ ಬಗ್ಗೆ ಕಾಂಗ್ರೆಸ್ ಪಕ್ಷವು ಕೇಂದ್ರದ ವಿರುದ್ಧ ಮತ್ತೆ ದಾಳಿಯನ್ನು ಆರಂಭಿಸಿದೆ.
‘ನಮ್ಮ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳು, ರಾಜಕಾರಣಿಗಳು, ಸಾರ್ವಜನಿಕರು,ಸರಕಾರಿ ಅಧಿಕಾರಿಗಳು,ಪ್ರತಿಪಕ್ಷ ನಾಯಕರು, ನ್ಯಾಯಾಂಗ ಮತ್ತು ಸಶಸ್ತ್ರ ಪಡೆಗಳ ಮೇಲೆ ಕಣ್ಗಾವಲು ಇರಿಸಲು ಮೋದಿ ಸರಕಾರವು ಪೆಗಾಸಸ್ ಅನ್ನು ಖರೀದಿಸಿತ್ತು ಮತ್ತು ಈ ಎಲ್ಲವುಗಳನ್ನು ಫೋನ್ ಕದ್ದಾಲಿಕೆಯೊಂದಿಗೆ ಗುರಿಯಾಗಿಸಿಕೊಳ್ಳಲಾಗಿತ್ತು. ಇದು ದೇಶದ್ರೋಹವಾಗಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇದೇ ಶಬ್ದಗಳನ್ನು ಪುನರುಚ್ಚರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಮೋದಿ ಸರಕಾರವು ದೇಶದ್ರೋಹವನ್ನೆಸಗಿದೆ ಎಂದು ಟ್ವೀಟಿಸಿದ್ದಾರೆ.
ಪೆಗಾಸಸ್ ಸ್ಪೈವೇರ್ ಅನ್ನು ತಯಾರಿಸುತ್ತಿರುವ ಇಸ್ರೇಲಿನ ಎನ್ಎಸ್ಒ ಗ್ರೂಪ್ ಜೊತೆಗೆ ತಾನು ಯಾವುದೇ ವಹಿವಾಟು ನಡೆಸಿಲ್ಲ ಎಂದು ಸಂಸತ್ತಿನಲ್ಲಿ ರಕ್ಷಣಾ ಸಚಿವಾಲಯವು ನೀಡಿದ್ದ ಹೇಳಿಕೆಯು ಕಾಂಗ್ರೆಸ್ ದಾಳಿಯ ಕೇಂದ್ರಬಿಂದುವಾಗಿದೆ.
ತಾನು ಸರಕಾರಗಳು ಮತ್ತು ಸರಕಾರಿ ಏಜೆನ್ಸಿಗಳೊಂದಿಗೆ ಮಾತ್ರ ವ್ಯವಹರಿಸುತ್ತೇನೆ ಎಂದು ಎನ್ಎಸ್ಒ ಹೇಳಿದ ಬಳಿಕ ಒತ್ತಡಕ್ಕೊಳಗಾಗಿದ್ದ ಸರಕಾರವು ತಾನು ಕಾನೂನುಬಾಹಿರವಾಗಿ ಕಣ್ಗಾವಲು ನಡೆಸಿಲ್ಲ ಎಂದು ಹೇಳಿತ್ತು. ಆದಾಗ್ಯೂ ತಾನು ಪೆಗಾಸಸ್ನ್ನು ಖರೀದಿಸಿಲ್ಲ ಎಂದು ಅದು ಎಂದಿಗೂ ಅಫಿಡವಿಟ್ ಮೂಲಕ ಅಥವಾ ಸಂಸತ್ತಿನಲ್ಲಿ ಹೇಳಿರಲಿಲ್ಲ.
ಪೆಗಾಸಸ್ನ ಖರೀದಿ ಮತ್ತು ನಿಯೋಜನೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ನೇರವಾಗಿ ಪ್ರಶ್ನಿಸಿದ್ದಾಗ ಮೋದಿ ಸರಕಾರವು ಅದಕ್ಕೆ ಸುಳ್ಳು ಹೇಳಿತ್ತು. ಅದು ಅಫಿಡವಿಟ್ನಲ್ಲಿ ‘ಸರಕಾರದ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ ’ಎಂದು ತಿಳಿಸಿತ್ತು ಎಂದು ಸುರ್ಜೆವಾಲಾ ಬೆಟ್ಟು ಮಾಡಿದರು.
ಸ್ಪೈವೇರ್ ಕುರಿತು ಕಳವಳಗಳನ್ನು ‘ಪ್ರತಿರೋಧಿಗಳಿಗಾಗಿ ವಿಘ್ನಸಂತೋಷಿಗಳ ವರದಿ’ ಎಂದು ಬಣ್ಣಿಸುವ ಮೂಲಕ ಪೆಗಾಸಸ್ನಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಗೃಹಸಚಿವ ಅಮಿತ್ ಶಾ ಪ್ರಯತ್ನಿಸಿದ್ದರು ಎಂದ ಸುರ್ಜೆವಾಲಾ,ಮೋದಿ ಸರಕಾರವು ನಾಗರಿಕರ ಮೇಲೆ ಕಣ್ಗಾವಲು ಇರಿಸಲು ತೆರಿಗೆದಾತರ ಹಣದಿಂದ ಇಸ್ರೇಲ್ನಿಂದ ಖರೀದಿಸಿದ್ದ ಕಾನೂನುಬಾಹಿರ ಸ್ಪೈವೇರ್ನ್ನು ಬಳಸಿತ್ತು ಎಂದು ಕಾಂಗ್ರೆಸ್ ಹಿಂದಿನಿಂದಲೂ ಹೇಳುತ್ತ ಬಂದಿರುವುದನ್ನು ಸ್ವತಂತ್ರ ತನಿಖಾ ವರದಿಗಳು ಸಾಬೀತುಗೊಳಿಸಿವೆ. ಇದು ದೇಶವಿರೋಧಿಯಾಗಿದೆ ಎಂದರು.
ಪೆಗಾಸಸ್ ಮೊಬೈಲ್ ಫೋನ್ಗಳನ್ನು ಹ್ಯಾಕ್ ಮಾಡುತ್ತದೆ,ಮೈಕ್ರೋಫೋನ್ಗಳು ಮತ್ತು ಕ್ಯಾಮೆರಾಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಫೋಟೊಗಳನ್ನು ತೆಗೆಯುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಎಸ್ಎಂಎಸ್ಗಳಿಂದ ಹಿಡಿದು ಕುಟುಂಬದ ಫೋಟೊಗಳು ಮತ್ತು ವಾಟ್ಸ್ಆ್ಯಪ್ ಚಾಟ್ಗಳವರೆಗೆ ದತ್ತಾಂಶಗಳನ್ನು ಅಕ್ರಮವಾಗಿ ಕಳವು ಮಾಡಲಾಗುತ್ತಿದೆ ಮತ್ತು ಮೋದಿಯವರ ಏಜೆನ್ಸಿಗಳಿಗೆ ರವಾನಿಸಲಾಗುತ್ತಿದೆ.
ಇದೆಲ್ಲವನ್ನು ನಿಮ್ಮ ವಿರುದ್ಧ ಬಳಸಿಕೊಳ್ಳಬಹುದು ಎಂದು ಹೇಳಿದ ಸುರ್ಜೆವಾಲಾ,ರಾಹುಲ್ ಗಾಂಧಿ ಮತ್ತು ಅವರ ಐವರು ಸಿಬ್ಬಂದಿಗಳು, ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ,ವಸುಂಧರಾ ರಾಜೇ,ಪ್ರವೀಣ್ ತೊಗಡಿಯಾ,ಸ್ಮತಿ ಇರಾನಿಯವರ ವಿಶೇಷ ಕರ್ತವ್ಯಾಧಿಕಾರಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು,ವಕೀಲರು,ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ವಿರುದ್ಧ ಪೆಗಾಸಸ್ ಬಳಸಲಾಗಿತ್ತು ಎಂದು ಆರೋಪಿಸಿದರು.







