ಅವಶ್ಯಕ ವಿಚಾರಗಳ ಕುರಿತು ಮಾತನಾಡಬೇಕೆ ಹೊರತು ಜಿನ್ನಾ, ಪಾಕಿಸ್ತಾನ ಹೇಳಿಕೆಗಳಿಂದ ಜನರನ್ನು ವಿಭಜಿಸುವುದಲ್ಲ: ಟಿಕಾಯತ್

ಲಕ್ನೋ, ಜ. 29: ಉತ್ತರಪ್ರದೇಶದ ಮತದಾರರು ರೈತರ ಕಲ್ಯಾಣದ ಬಗ್ಗೆ ಮಾತನಾಡುವವರ ಬಗ್ಗೆ ಮಾತ್ರ ಒಲವು ತೋರುತ್ತಾರೆ. ಧಾರ್ಮಿಕ ನೆಲೆಯಲ್ಲಿ ಮತದಾರರನ್ನು ಧ್ರುವೀಕರಣಗೊಳಿಸುವುದರಿಂದ ಯಾವುದೇ ಪ್ರಯೋಜನವಾಗದು ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ರೈತರು ತಮ್ಮ ಕೃಷ್ಯುತ್ಪನ್ನಗಳಿಗೆ ಕಡಿಮೆ ಬೆಲೆಯನ್ನು ಪಡೆಯುವ ಹಾಗೂ ಅತ್ಯಧಿಕ ವಿದ್ಯುತ್ ಬಿಲ್ ಪಾವತಿಸುವ ಬಲವಂತಕ್ಕೆ ಒಳಗಾಗಿ ಸಂಕಷ್ಟದ ಕಾಲವನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ರೈತರು, ನಿರುದ್ಯೋಗಿ ಯುವಕರು ಹಾಗೂ ಹಣದುಬ್ಬರ ಚುನಾವಣೆಯ ವಿಷಯವಾಗಬೇಕು. ಆದರೆ, ಎಂದಿನಂತೆ ಜಿನ್ನಾ ಹಾಗೂ ಪಾಕಿಸ್ತಾನದ ಕುರಿತ ಹೇಳಿಕೆಗಳ ಮೂಲಕ ಹಿಂದೂ ಹಾಗೂ ಮುಸ್ಲಿಮರನ್ನು ಧ್ರುವೀಕರಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗದು. ಬದಲಾಗಿ ಹಾನಿಯಾಗಲಿದೆ ಎಂದು ಟಿಕಾಯತ್ ಹೇಳಿದರು. ಆದರೆ, ಅವರು ಯಾವುದೇ ವ್ಯಕ್ತಿ ಅಥವಾ ಪಕ್ಷದ ಹೆಸರು ಹೇಳಿಲ್ಲ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಅದರ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಪಾಕಿಸ್ತಾನದ ಬೆಂಬಲಿಗ ಹಾಗೂ ಜಿನ್ನಾ ಆರಾಧಕ ಎಂದು ಹೇಳಿದ್ದರು.





