ರೋಗಿಯನ್ನು ನಿರ್ಲಕ್ಷ್ಯಿಸಿ ವೀಡಿಯೋ ಗೇಮ್ ಆಡುತ್ತಿದ್ದ ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿ: ಆರೋಪ
ವೀಡಿಯೋ ವೈರಲ್ ಬಳಿಕ ವೈದ್ಯ ವಿದ್ಯಾರ್ಥಿ ಅಮಾನತು

ಮಂಗಳೂರು, ಜ.29: ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗೆ ಕರೆತಂದಾಗ ಸ್ಪಂದನೆ ನೀಡದೆ ಅಲ್ಲಿದ್ದ ಮೆಡಿಕಲ್ ವಿದ್ಯಾರ್ಥಿ ವೀಡಿಯೋ ಗೇಮ್ನಲ್ಲಿ ನಿರತವಾಗಿರುವ ವೀಡಿಯೋವೊಂದು ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ವೆದ್ಯ ವಿದ್ಯಾರ್ಥಿಯನ್ನು ಅಮಾನತುಗೊಳಿಸಿರುವುದಾಗಿ ತಿಳಿದು ಬಂದಿದೆ.
ಅಧಿಕ ರಕ್ತದೊತ್ತಡದಿಂದ ಬಿದ್ದು ತಲೆಗೆ ಗಾಯಗೊಂಡ ಬಂಟ್ವಾಳ ವಗ್ಗದ ವ್ಯಕ್ತಿಯೊಬ್ಬರನ್ನು ಜ.23ರಂದು ವೆನ್ಲಾಕ್ ಆಸ್ಪತ್ರೆಗೆ ಕರೆ ತರಲಾಗಿತ್ತು. ರೋಗಿ ಆಸ್ಪತ್ರೆಗೆ ತಲುಪಿದಾಗ ಅವರಿಗೆ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾದ ಮೆಡಿಕಲ್ ವಿದ್ಯಾರ್ಥಿ ಮತ್ತು ಅಲ್ಲಿರುವ ಸಿಬ್ಬಂದಿ ತಮ್ಮ ಕಂಪ್ಯೂಟರ್ನಲ್ಲಿ ವಿಡಿಯೋ ಗೇಮ್ ಆಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ರೋಗಿಯ ಮನೆಯವರು ಅಗತ್ಯ ಚಿಕಿತ್ಸೆ ನೀಡುವಂತೆ ಮಾಡಿದ್ದರೂ ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನುವ ಆರೋಪ ವ್ಯಕ್ತವಾಗಿತ್ತು.
ವಿದ್ಯಾರ್ಥಿ ಅಮಾನತು
ವೆನ್ಲಾಕ್ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಖಾಸಗಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ ವಿಡಿಯೋ ಗೇಮ್ ಆಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಆ ವಿದ್ಯಾರ್ಥಿಯನ್ನು ಅಮಾನತಿನಲ್ಲಿಡಲು ಕ್ರಮಕೈಗೊಳ್ಳಲಾಗಿದೆ. ಇದು ಮಾತ್ರವಲ್ಲದೆ ವೆನ್ಲಾಕ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯ ನಿರತ ಸರಕಾರಿ ವೈದ್ಯರು ಮತ್ತು ಶುಶ್ರೂಷಕರು ಈ ಬಗ್ಗೆ ನಿಗಾವಹಿಸುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತ್ಯು