ಚಿಕ್ಕಮಗಳೂರು: ಪ್ರೇಯಸಿಯ ಹತ್ಯೆಗೈದು ಮೃತದೇಹದೊಂದಿಗೆ ಕಾಡಿನಲ್ಲಿ ರಾತ್ರಿ ಕಳೆದ ಆರೋಪಿ!

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಜ.29: ಪ್ರಿಯತಮನೇ ಪ್ರೇಯಸಿಯನ್ನು ಹತ್ಯೆ ಮಾಡಿ ರಾತ್ರಿ ಇಡೀ ಮೃತದೇಹದೊಂದಿಗೆ ಕಳೆದ ಘಟನೆ ಶನಿವಾರ ತಾಲೂಕಿನ ಜಡಗನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಅಭಿಷೇಕ್ ಎಂಬಾತನೇ ತನ್ನ ಪ್ರೇಯಸಿ ಸುಮಾಳನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದು, ಕಳೆದ ಒಂದು ವರ್ಷದಿಂದ ಅಭಿಷೇಕ್ ಹಾಗೂ ಸುಮಾ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಚಾರ ಕುಟಂಬಸ್ಥರಿಗೆ ತಿಳಿದಿದ್ದರಿಂದ ಯುವತಿಗೆ ಮದುವೆಯ ವಯಸ್ಸು ಆದ ಬಳಿಕ ಮದುವೆ ಮಾಡಿಸುವುದಾಗಿ ಹೆತ್ತವರು ತಿಳಿಸಿದ್ದರು. ಈ ಕಾರಣಕ್ಕೆ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರೆಂದು ತಿಳಿದು ಬಂದಿದೆ.
ಕಳೆದ ಶುಕ್ರವಾರ ರಾತ್ರಿ ವೇಳೆ ಅಭಿಷೇಕ್ ಸಂಬಂಧಿಕರ ಮನೆಯ ಕಾರ್ಯಕ್ರಮದ ನೆಪ ಹೇಳಿ ಮನೆಯಿಂದ ಸುಮಾಳನ್ನು ಕರೆತಂದಿದ್ದಾನೆ. ಈ ವೇಳೆ ಗ್ರಾಮದ ಸಮೀಪದಲ್ಲಿರುವ ಗೋಮಾಳ ಜಾಗದಲ್ಲಿ ಸುಮಾಳೊಂದಿಗೆ ದೈಹಿಕ ಸಂಪರ್ಕಕ್ಕಾಗಿ ಒತ್ತಾಯಿಸಿದ್ದಾನೆ, ಇದಕ್ಕೆ ಸುಮಾ ಒಪ್ಪದಿದ್ದಾಗ ಆಕೆಯೊಂದಿಗೆ ಬಲವಂತದಿಂದ ದೈಹಿಕ ಸಂಪರ್ಕ ನಡೆಸಿದ್ದಾನೆ. ಇದರಿಂದ ನೊಂದ ಪ್ರೇಯಸಿ ಸುಮಾ ಮನೆಯವರಿಗೆ ತಿಳಿಸುವುದಾಗಿ ಹೇಳಿದ್ದಾಳೆ. ಇದರಿಂದ ಕುಪಿತನಾದ ಅಭಿಷೇಕ್ ಸುಮಾಳಿಗೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಸುಮಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.
ತಾನು ಮಾಡಿದ ಹಲ್ಲೆಯಿಂದ ಪ್ರೇಯಸಿ ಸುಮಾ ಮೃತಪಟ್ಟಿದ್ದರಿಂದ ಅಘಾತಕ್ಕೊಳಗಾದ ಅಭಿಷೇಕ್ ಶವವನ್ನು ಏನು ಮಾಡುವುದೆಂದು ತಿಳಿಯದೇ ಇಡೀ ರಾತ್ರಿ ಸುಮಾಳ ಶವದೊಂದಿಗೆ ಕಾಲ ಕಳೆದಿದ್ದಾನೆ. ಶನಿವಾರ ಬೆಳಗ್ಗೆ ಗೋಮಾಳದಲ್ಲಿ ಅಭಿಷೇಕ್ನನ್ನು ಕಂಡವರು ಆತನ ನಡವಳಿಕೆಯಿಂದ ಶಂಕೆಗೊಂಡು ವಿಚಾರಿಸಿದಾಗ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸ್ವರ್ಣಾ ಸೇರಿದಂತೆ ಸಿಬ್ಬಂದಿ ತೆರಳಿ ತಪಾಸಣೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಯುವಕ ಅಭಿಷೇಕ್ನನ್ನು ವಿಚಾರಣೆಗೊಳಪಡಿಸಿದಾಗ ತಾನು ಎಸಗಿದ ಕೃತ್ಯವನ್ನು ಆರೋಪಿ ಬಾಯಿ ಬಿಟ್ಟಿದ್ದಾನೆಂದು ತಿಳಿದು ಬಂದಿದೆ. ಸುಮಾಳ ಸಾವಿನ ಬಗ್ಗೆ ಆಕೆಯ ಪೋಷಕರು ಅಭಿಷೇಕ್ ಮೇಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದ್ದರು.







