ಬೌದ್ಧ ಸನ್ಯಾಸಿ ಥಿಚ್ ನ್ಹಾಟ್ ಅಂತ್ಯಕ್ರಿಯೆ

ಥಿಚ್ ನಾತ್ ಹಾನ್(photo:twitter/@thichnhathanh)
ಹನೋಯಿ, ಜ.29: ವಿಯೆಟ್ನಾಮ್ನ ಬೌದ್ಧ ಸನ್ಯಾಸಿ ಥಿಚ್ ನ್ಹಾಟ್ ಹಾನ್ ಅವರ ಅಂತ್ಯಸಂಸ್ಕಾರ ಶನಿವಾರ ನಡೆದಿದ್ದು ಸಾವಿರಾರು ಬೌದ್ಧಸನ್ಯಾಸಿಗಳು ಹಾಗೂ ಅನುಯಾಯಿಗಳು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.
ಅಂತ್ಯಸಂಸ್ಕಾರಕ್ಕೂ ಮುನ್ನ ವಿಯೆಟ್ನಾಮ್ನ ಹ್ಯೂ ನಗರದಲ್ಲಿರುವ ಪಗೋಡಾದಿಂದ(ಬೌದ್ಧರ ಪ್ರಾರ್ಥನಾಲಯ)ದಿಂದ ಪ್ರಧಾನ ರಸ್ತೆಯಲ್ಲಿ ಅವರ ಮೃತದೇಹವನ್ನಿಟ್ಟ ಪೆಟ್ಟಿಗೆ(ಕಾಫಿನ್) ಅನ್ನು ಬೌದ್ಧ ಸನ್ಯಾಸಿಗಳು ಹೆಗಲ ಮೇಲೆ ಹೊತ್ತುಕೊಂಡು ಸಾಗಿದಾಗ ಸಾವಿರಾರು ಮಂದಿ ತಲೆಬಗ್ಗಿಸಿ ಅಂತಿಮ ಗೌರವ ಸಲ್ಲಿಸಿದರು.
ಧ್ಯಾನಾವಸ್ಥೆಯ ಅಭ್ಯಾಸವನ್ನು ಪೂರ್ವ ಮತ್ತು ಪಾಶ್ಚಿಮಾತ್ಯ ದೇಶದಲ್ಲಿ ಪ್ರಸಾರ ಮಾಡಲು ನೆರವಾದ ಖ್ಯಾತ ಝೆನ್ಗುರು ಥಿಚ್ ನ್ಹಾಟ್ ಜನವರಿ 22ರಂದು ತಮ್ಮ 95ನೇ ವಯಸ್ಸಿನಲ್ಲಿ ಮೃತರಾಗಿದ್ದರು. ಅವರ ಪಾರ್ಥಿವ ಶರೀರವನ್ನು ತು ಹ್ಯೂ ನಗರದಲ್ಲಿನ ಪಗೋಡಾದಲ್ಲಿನ ಸಭಾಂಗಣದಲ್ಲಿ ಬೌದ್ಧ ಸಂಪ್ರದಾಯದ ಪ್ರಕಾರ 7 ದಿನ ಇಡಲಾಗಿತ್ತು. ಈ ಸಂದರ್ಭ ಅವರ ಶಿಷ್ಯರು ಮತ್ತು ಅನುಯಾಯಿಗಳು ಮೌನವಾಗಿ ಗೌರವಾರ್ಪಿಸುವ ಜತೆ ಧ್ಯಾನ ನಡೆಸುವ ಮೂಲಕ ಅವರ ಬೋಧನೆಗಳಿಗೆ ಗೌರವ ಸಲ್ಲಿಸಿದ್ದರು. ಥಿಚ್ ನ್ಹಾಟ್ ಅವರ ಅಂತಿಮ ಇಚ್ಛೆಯ ಪ್ರಕಾರ ಅವರ ಅಂತ್ಯಸಂಸ್ಕಾರದ ಬಳಿಕ ಬೂದಿಯನ್ನು ಪ್ಲಮ್ ಗ್ರಾಮದಲ್ಲಿ ಹಾಗೂ ವಿಶ್ವದಾದ್ಯಂತದ ಬೌದ್ಧಮಠದಲ್ಲಿ ಚದುರಿ ಬಿಡಲಾಗುವುದು ಎಂದು ಮೂಲಗಳು ಹೇಳಿವೆ.







