ನಟಿಗೆ ಕಿರುಕುಳ ಪ್ರಕರಣ: ಹಳೆಯ ಮೊಬೈಲ್ ಫೋನ್ ಗಳನ್ನು ಸಲ್ಲಿಸಲು ದಿಲೀಪ್ ಗೆ ಹೈಕೋರ್ಟ್ ಸೂಚನೆ

ತಿರುವನಂತಪುರ, ಜ. 29: ಎಲ್ಲ ಹಳೆಯ ಮೊಬೈಲ್ ಫೋನ್ ಗಳನ್ನು ಸೋಮವಾರದ ಒಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ನಟ ದಿಲೀಪ್ ಗೆ ಕೇರಳ ಉಚ್ಚ ನ್ಯಾಯಾಲಯ ಸೋಮವಾರ ನಿರ್ದೇಶಿಸಿದೆ. 6 ಮೊಬೈಲ್ ಫೋನ್ಗಳನ್ನು ಮುಚ್ಚಿದ ಲಕೋಟೆಯಲ್ಲಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಟಿಗೆ ಕಿರುಕುಳ ಪ್ರಕರಣದ ತನಿಖಾಧಿಕಾರಿಗಳ ಹತ್ಯೆ ಪಿತೂರಿ ಪ್ರಕರಣದ ಪ್ರತಿವಾದಿಗಳಿಗೆ ನ್ಯಾಯಾಲಯ ಸೂಚಿಸಿತು.
ಈ ಪ್ರಕರಣದಲ್ಲಿ 7 ಫೋನ್ಗಳನ್ನು ಸಲ್ಲಿಸುವಂತೆ ಪ್ರಾಸಿಕ್ಯೂಷನ್ ಕೋರಿತ್ತು. ಆದರೆ, 7ನೇ ಫೋನ್ ಬಗ್ಗೆ ಕೆಲವು ಗೊಂದಲ ಇದ್ದುದರಿಂದ, 6 ಫೋನ್ಗಳನ್ನು ಸಲ್ಲಿಸುವಂತೆ ಮಾತ್ರ ನ್ಯಾಯಾಲಯ ಸೂಚಿಸಿತು. ಪ್ರಕರಣದ ಆರೋಪಿಗಳಾಗಿರುವ ನಟ ದಿಲೀಪ್ ಹಾಗೂ ಇತರ ಆರೋಪಿಗಳಿಗೆ ಸೇರಿದ ಮೊಬೈಲ್ ಫೋನ್ಗಳನ್ನು ಸಲ್ಲಿಸುವಂತೆ ಕ್ರೈಮ್ ಬ್ರಾಂಚ್ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಗೋಪಿನಾಥ್ ಪಿ. ನೇತೃತ್ವದ ಏಕ ಸದಸ್ಯ ಪೀಠ ಈ ಆದೇಶ ಜಾರಿ ಮಾಡಿತು. ಫೋನ್ಗಳು ಮುಂಬೈಯಲ್ಲಿ ಇದೆ ಎಂದು ಉಲ್ಲೇಖಿಸಿ ಮಂಗಳವಾರದ ವರೆಗೆ ಗಡುವು ನೀಡುವಂತೆ ದಿಲೀಪ್ ಪರ ವಕೀಲರು ಮನವಿ ಮಾಡಿದ್ದರು. ಆದರೆ, ಮೊಬೈಲ್ಗಳನ್ನು ಸೋಮವಾರ ಸಲ್ಲಿಸುವ ತನ್ನ ದೃಢ ನಿರ್ಧಾರವನ್ನು ನ್ಯಾಯಾಲಯ ಬದಲಿಸಲಿಲ್ಲ.





