ಸಂಸದ ಹೆಗಡೆ, ಶಾಸಕ ಸಿ.ಟಿ.ರವಿ ವಿರುದ್ಧ ಪ್ರಕರಣ ದಾಖಲಿಕೆಗೆ ನಿರ್ದೇಶನ ನೀಡಲು ಕೋರ್ಟ್ ನಕಾರ
ಟಿಪ್ಪು ಜಯಂತಿ ಕುರಿತ ವಿವಾದಾತ್ಮಕ ಟ್ವೀಟ್ ವಿಚಾರ

ಬೆಂಗಳೂರು, ಜ.29: 2017ರ ಟಿಪ್ಪು ಜಯಂತಿ ಸಂದರ್ಭದಲ್ಲಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸದಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದ ಹಾಗೂ ಟಿಪ್ಪು ಕುರಿತಂತೆ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶಿಸುವಂತೆ ಕೋರಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿರಾಕರಿಸಿದೆ.
ಇಂದಿರಾನಗರದ ನಿವಾಸಿ ಎ.ಆಲಂ ಪಾಷಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್, ಅರ್ಜಿದಾರರು ಸಿಆರ್‍ಪಿಸಿ ಸೆಕ್ಷನ್ 154(1) ಮತ್ತು (3) ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ತಿಳಿಸಿ, ದೂರನ್ನು ಅರ್ಜಿದಾರರಿಗೆ ಹಿಂದಿರುಗಿಸಲು ನ್ಯಾಯಾಲಯ ಆದೇಶಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಅಫಿಡವಿಟ್ ಸಲ್ಲಿಸದಿದ್ದಲ್ಲಿ ಸಿಆರ್‍ಪಿಸಿ ಸೆಕ್ಷನ್ 156(3)ರ ಅಡಿ ಈ ಕೋರ್ಟ್ ನಿರ್ದೇಶನ ನೀಡಲಾಗದು. ಹೀಗಾಗಿ, ಸರಿಯಾದ ರೀತಿಯಲ್ಲಿ ಆದೇಶ ಪಾಲಿಸಿದ ಬಳಿಕ ಅಗತ್ಯಬಿದ್ದಲ್ಲಿ ಈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಜನಪ್ರತಿನಿಧಿಗಳ ಕೋರ್ಟ್ ತಿಳಿಸಿದೆ.





