ಬಜೆಟ್ ಅಧಿವೇಶನ: ಜ.31,ಫೆ.1ರಂದು ಶೂನ್ಯವೇಳೆ, ಪ್ರಶ್ನೆ ವೇಳೆಗೆ ಅವಕಾಶವಿಲ್ಲ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(file photo:PTI)
ಹೊಸದಿಲ್ಲಿ,ಜ.29: ಬಜೆಟ್ ಅಧಿವೇಶನದ ಮೊದಲ ಎರಡು ದಿನಗಳಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಶೂನ್ಯವೇಳೆ ಮತ್ತು ಪ್ರಶ್ನೆವೇಳೆ ಇರುವುದಿಲ್ಲ. ಜ.31ರಂದು ಸೆಂಟ್ರಲ್ ಹಾಲ್ನಲ್ಲಿ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭಾಷಣದೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿಗಾಗಿ ಕೇಂದ್ರ ಮುಂಗಡಪತ್ರವನ್ನು ಮಂಡಿಸುವರು. ಈ ಎರಡು ದಿನಗಳಲ್ಲಿಯ ಬೆಳವಣಿಗೆಗಳಿಂದಾಗಿ 17ನೇ ಲೋಕಸಭೆಯ ಎಂಟನೇ ಅಧಿವೇಶನದ ಮೊದಲ ಎರಡು ದಿನಗಳಲ್ಲಿ ಉಭಯ ಸದನಗಳಲ್ಲಿ ಶೂನ್ಯವೇಳೆ ಮತ್ತು ಪ್ರಶ್ನೆವೇಳೆ ಇರುವುದಿಲ್ಲ ಎಂದು ಸಂಸತ್ತು ಹೇಳಿಕೆಯಲ್ಲಿ ತಿಳಿಸಿದೆ.
ಶೂನ್ಯವೇಳೆಯಲ್ಲಿ ಎತ್ತಲಾದ ತುರ್ತು ಸಾರ್ವಜನಿಕ ಮಹತ್ವದ ವಿಷಯಗಳನ್ನು ಫೆ.2ರಂದು ಕೈಗೆತ್ತಿಕೊಳ್ಳಲಾಗುವುದು. ಆದಾಗ್ಯೂ ಬುಧವಾರ,ಫೆ.2ರಂದು ಶೂನ್ಯವೇಳೆಯಲ್ಲಿ ತುರ್ತು ಸಾರ್ವಜನಿಕ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಲು ಸದಸ್ಯರು ಮಂಗಳವಾರ, ಫೆ.1ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ನಡುವೆ ಇ-ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅಥವಾ ಸಂಸದೀಯ ನೋಟಿಸ್ ಕಚೇರಿಯಲ್ಲಿ ಭೌತಿಕವಾಗಿ ನೋಟಿಸ್ಗಳನ್ನು ಮಂಡಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಂಸದೀಯ ನಿಯಮಗಳು ಮತ್ತು ಕಾರ್ಯವಿಧಾನಗಳಂತೆ ಪ್ರತಿದಿನ 60 ನಿಮಿಷಗಳ ಅವಧಿಗೆ ಪ್ರಶ್ನೆವೇಳೆ ಮತ್ತು ಶೂನ್ಯವೇಳೆ ಕಲಾಪಗಳನ್ನು ನಡೆಸಲಾಗುತ್ತದೆ. ಲೋಕಸಭೆಯಲ್ಲಿ ಪ್ರಶ್ನೆವೇಳೆಯು ದಿನದ ಕಲಾಪಗಳ ಪ್ರಾರಂಭದಲ್ಲಿ,ಅಂದರೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯುತ್ತದೆ ಮತ್ತು ನಂತರ ಶೂನ್ಯವೇಳೆಯಿರುತ್ತದೆ. ರಾಜ್ಯಸಭೆಯಲ್ಲಿ ಬೆಳಿಗ್ಗೆ 11ಗಂಟೆಗೆ ಶೂನ್ಯವೇಳೆ ಮತ್ತು ಮಧ್ಯಾಹ್ನ 12 ಗಂಟೆಗೆ ಪ್ರಶ್ನೆವೇಳೆ ಆರಂಭಗೊಳ್ಳುತ್ತವೆ.
ಜ.31ರಂದು ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣದ ಬಳಿಕ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಫೆ.1ರಂದು ಪೂರ್ವಾಹ್ನ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಮುಂಗಡಪತ್ರವನ್ನು ಮಂಡಿಸಲಿದ್ದಾರೆ. ಈ ಸಲದ ಮುಂಗಡಪತ್ರವು ಕಾಗದರಹಿತವಾಗಿರುತ್ತದೆ.







