ನ್ಯಾಯಾಂಗವನ್ನು ಪ್ರತಿನಿಧಿಸುವವರೇ ಅಂಬೇಡ್ಕರ್‌ರನ್ನು ಅವಮಾನಿಸುತ್ತಾರೆಂದರೆ...

ರಾಯಚೂರಿನ ಸೆಶೆನ್ಸ್ ನ್ಯಾಯಾಧೀಶರೊಬ್ಬರು ಅಂಬೇಡ್ಕರ್ ಭಾವಚಿತ್ರವಿರುವುದರಿಂದ ಧ್ವಜಾರೋಹಣವನ್ನು ನಿರಾಕರಿಸಿರುವುದು ದೇಶದ ಎಲ್ಲ ಮಾನವಂತ ನಾಗರಿಕರು ತಲೆ ತಗ್ಗಿಸುವ ಆಘಾತಕಾರಿ ಸಂಗತಿ. ನಾನು ಕ್ಷಣ ಹೊತ್ತು ಅವಮಾನದಲ್ಲಿ ತಲ್ಲಣಗೊಂಡು ಬೆವೆತು ಹೋದೆ. ಯಾವುದೇ ಬಲಾಢ್ಯ ಸಮುದಾಯ, ಎಂಥದ್ದೇ ಹುನ್ನಾರ ನಡೆಸಿದರೂ ಸಂವಿಧಾನ ರಚನೆ, ಅದಕ್ಕಾಗಿ ನಿಸ್ವಾರ್ಥದಿಂದ ದುಡಿದವರ ತ್ಯಾಗಗಳನ್ನು ಧ್ರುವೀಕರಣಗೊಂಡ ಚರ್ಚೆಗಳ ಮೂಲಕ ಸುಳ್ಳಾಗಿಸಲು ಸಾಧ್ಯವಿಲ್ಲ, ಆಧುನಿಕ ಭಾರತದ ಇತಿಹಾಸದಲ್ಲಿ ದಾಖಲಾಗಿರುವ ಸತ್ಯಾಂಶಗಳನ್ನು ಏನೇ ಮಾಡಿದರೂ ತಿರುಚಲಾಗದು. ರಾಜಕೀಯ ಪಕ್ಷಗಳು ಹುಟ್ಟುತ್ತವೆ. ಹಣದ ಮದದಿಂದ ಅಧಿಕಾರ ನಡೆಸುವಾಗ ಕೊಬ್ಬುತ್ತವೆ. ಹಾಗೆಯೇ, ಜನ ತಿರಸ್ಕರಿಸಿದಾಗ ತ್ಯಾಜ್ಯ ವಸ್ತುವಿನಂತೆ ಕೊಳೆತು ಸಾಯುತ್ತವೆ. ಭಾರತ ದೇಶ ಅಥವಾ ಇಂಡಿಯನ್ ನೇಶನ್ ಎನ್ನುವುದು ಎಷ್ಟೇ ಅಮೂರ್ತ ಕಲ್ಪನೆಯಾದರೂ ಯಾವುದೇ ರಾಜಕೀಯ ಪಕ್ಷದ ಗುತ್ತಿಗೆಯಲ್ಲ. ಇಲ್ಲಿ, ಗ್ರಾಮ ಪಂಚಾಯತ್ ಸದಸ್ಯ, ಚುನಾಯಿತ ಪ್ರಧಾನಿ, ಪಕ್ಷಗಳ ಒಮ್ಮತದಿಂದ ಆಯ್ಕೆಯಾಗುವ ರಾಷ್ಟ್ರಪತಿ, ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಮತ್ತು ಅತಿ ಸಾಮಾನ್ಯ ಹೀಗೆ ಎಲ್ಲರಿಗೂ ಒಂದೇ ಸಂವಿಧಾನ, ಕಾನೂನು, ನ್ಯಾಯವ್ಯವಸ್ಥೆ. ನಾವು ಯಾವುದೇ ಜಾತಿ, ಲಿಂಗ, ಕುಲಮತ, ಬುಡಕಟ್ಟು, ಲೈಂಗಿಕ ಆಯ್ಕೆ-ಅಪೇಕ್ಷೆಗಳಿಗೆ ಸೇರಿದವರಾದರೂ ಅಂತಿಮವಾಗಿ ಒಂದೇ ಸಂವಿಧಾನವನ್ನು ಒಪ್ಪಿಕೊಂಡು ಬದುಕಲು ಆಯ್ಕೆ ಮಾಡಿಕೊಂಡ ದೇಶಕ್ಕೆ ಸೇರಿದ್ದೇವೆ.
ಕಾನೂನು ವಿದ್ಯಾಭ್ಯಾಸ ಮಾಡಿ, ಅರ್ಹತೆಯ ಪರೀಕ್ಷೆ ಬರೆದು ಈ ಹುದ್ದೆಗೆ ಬಂದ ರಾಯಚೂರಿನ ನ್ಯಾಯಾಧೀಶರು ಈ ಸಂವೇದನೆ-ಸೂಕ್ಷ್ಮತೆ ಹೊಂದಿಲ್ಲವೆಂದರೆ ಅಂತಹವರು ಆ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರು. ಸರಕಾರ ಅವರನ್ನು ಕೂಡಲೇ ಕೆಲಸದಿಂದ ಬಿಡುಗಡೆ ಮಾಡಬೇಕು. ಮಾತ್ರವಲ್ಲ, ಧ್ವಜಾರೋಹಣವನ್ನು ನಿರ್ದಿಷ್ಟ ಕಾರಣಕ್ಕೆ ನಿರಾಕರಿಸಿದ್ದರೆ ಅವರ ಮೇಲೆ ಸಂವಿಧಾನ ನಿಂದನೆ ನಿಯಮಾವಳಿ ಪ್ರಕಾರ ಪ್ರಕರಣ ದಾಖಲಿಸಿ, ಬಂಧಿಸಬೇಕು. (ರಾಷ್ಟ್ರ ನಿಂದನೆ ಕಾನೂನು: 1971, ಆ್ಯಕ್ಟ್ 69, 1971)
ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರೋ ಇಲ್ಲವೋ ಎಂದು ಕೂದಲು ಸೀಳುವವರಿಗೆ:
ಸಂವಿಧಾನದ ಕರಡು ರಚನೆಯ ಹೊರತಾಗಿಯೂ ಬಾಬಾ ಸಾಹೇಬರು ವಿಶ್ವಮಾನ್ಯ ಹಣಕಾಸು ತಜ್ಞರಾಗಿದ್ದರು, ಮಾನವಶಾಸ್ತ್ರಜ್ಞ, ಸಾಮಾಜಿಕ ಚಿಂತಕರಾಗಿದ್ದರು. ಅಂತಹ ವಿಷಯಗಳ ಕುರಿತು ಶ್ರೇಷ್ಠ ಪ್ರಬಂಧಗಳನ್ನು ಪ್ರಕಟಿಸಿದವರಾಗಿದ್ದರು. ಅವರ ಬರಹದ ವ್ಯಾಪ್ತಿ, ಚಿಂತನೆಯ ಸೋಪಜ್ಞತೆಯ ಆಳವನ್ನು ಅವರ ಯಾವುದೇ ಬಿಡಿ ಲೇಖನ ಓದಿದರೂ ಗೊತ್ತಾಗುತ್ತದೆ. ಇದರರ್ಥವಿಷ್ಟೇ: ಅಂಬೇಡ್ಕರ್‌ರವರು ಇಂದು ಒಪ್ಪಿತವಾದ ಸಂವಿಧಾನದಂತಹ ಹತ್ತು ಸಂವಿಧಾನಗಳನ್ನು ರಚಿಸುವ ಬೌದ್ಧಿಕ ಸಾಮರ್ಥ್ಯವನ್ನು ಹೊಂದಿದ್ದರು. ಮಾತ್ರವಲ್ಲ, ಒಂದು ಸಮಾಜವನ್ನು ಕಾಡುವ ದೀರ್ಘಕಾಲದ ಆರ್ಥಿಕ-ಸಾಂಸ್ಕೃತಿಕ-ಸಾಮಾಜಿಕ ಕಾಯಿಲೆಗಳಿಗೆ ಎಂತಹ ಮದ್ದನ್ನು, ಹೇಗೆ ಮತ್ತು ಎಷ್ಟು ಕಾಲ ನೀಡಬೇಕು ಎಂದು ಖಚಿತವಾಗಿ ಹೇಳಬಲ್ಲ ಶ್ರೇಷ್ಠ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಮತ್ತು ರಾಜಕೀಯ ವೈದ್ಯರಾಗಿದ್ದರು. ಸಂವಿಧಾನದ ಬಹುಮುಖ್ಯ ಅಂಗವಾದ ನ್ಯಾಯಾಂಗವನ್ನು ಪ್ರತಿನಿಧಿಸುವ ವ್ಯಕ್ತಿ ಬಾಬಾ ಸಾಹೇಬರನ್ನು ಅವಮಾನಿಸುತ್ತಾರೆಂದರೆ ಅವರಿಗೆ, ಆ ಮೂಲಕ ಅಂತಹ ಮನಸ್ಥಿತಿಯವರಿಗೆ ಪಾಠ ಕಲಿಸಲು ಇದು ಸಕಾಲ.







