ಪುತ್ತೂರು ಗಾಂಧಿಕಟ್ಟೆಯಲ್ಲಿ ಹುತಾತ್ಮ ದಿನಾಚರಣೆ, ಪಾದಯಾತ್ರೆ

ಪುತ್ತೂರು: ಗಾಂಧೀಜಿ ಅವರ ವಿಚಾರಗಳು ಜಗತ್ತಿಗೇ ಮಾದರಿಯಾಗಿದ್ದು, ಎಲ್ಲರ ಸ್ಮರಣೆಯ ಕೇಂದ್ರವಾಗಿರುವ ಮಹಾತ್ಮ ಗಾಂಧೀಜಿ ಅವರ ಸ್ಮರಣೆಯ ಜೊತೆಗೆ ಗಾಂಧೀಜಿ ವಿಚಾರದೆಡೆಗೆ ಎಲ್ಲರೂ ಸಾಗಬೇಕು. ಗಾಂಧಿ ಪ್ರೇಣಿತ ಸಮಾಜ ಮತ್ತೊಮ್ಮೆ ಸೃಷ್ಠಿಯಾಗಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರಿನ ಗಾಂಧಿಕಟ್ಟೆಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧಿಕಟ್ಟೆ ಸಮಿತಿ ಹಾಗೂ ಗಾಂಧಿ ವಿಚಾರ ವೇದಿಕೆಯ ಸಹಯೋಗದಲ್ಲಿ ನಡೆದ ಹುತಾತ್ಮರ ದಿನಾಚರಣೆ ಹಾಗೂ ಗಾಂಧೀಜಿ ಪಾದಸ್ಪರ್ಶ ಮಾಡಿದರಾಗಿದ್ದ ಕುಮೇರು ಕಾಲನಿಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಗಾಂಧೀಜಿ ಪ್ರತಿಮೆಗೆ ಹಾರಾರ್ಪಣೆ ಮಾಡಿ, ದೀಪ ಪ್ರಜ್ವಲನೆ ಮಾಡಿ ಮಾತನಾಡಿದರು.
ಗಾಂಧಿಜಿ ಅವರ ಆದರ್ಶಗಳು ಇಂದಿಗೂ ದೇಶಕ್ಕೆ ಅಗತ್ಯವಿದೆ. ಸಮಾಜಕ್ಕಾಗಿ, ದೇಶಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟು ಬಲಿದಾನಗೊಂಡ ಗಾಂಧಿಜಿಯವರಂತಹ ಹುತಾತ್ಮರು ಮಹಾತ್ಮರಾದರೂ ನಮಗೆ ದಾರಿದೀಪವಾಗುತ್ತಾರೆ. ದುಷ್ಚಟ ಮುಕ್ತ ಸಜ್ಜನ ಸಮಾಜ ಗಾಂಧೀಜಿ ಕನಸಾಗಿತ್ತು. ರಾಮರಾಜ್ಯದ ಕಲ್ಪನೆ ಅವರದಾಗಿತ್ತು. ಮೌಲ್ಯಾಧಾರಿತ ರಾಜಕಾರಣ ಅವರ ಪ್ರತಿಪಾದನೆಯಾಗಿತ್ತು. ಸ್ವಾಭಿಮಾನಿ ಸಮಾಜ ಅವರ ವಿಚಾರಧಾರೆಯಾಗಿತ್ತು. ಅದೆಲ್ಲವನ್ನೂ ಬದುಕಿನಲ್ಲಿ ಅಳವಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪುತ್ತೂರು ಉಪವಿಭಾಗದ ಸಹಾಯಕ ಕನಿಷನರ್ ಡಾ. ಯತೀಶ್ ಉಳ್ಳಾಲ್ ಮಾತನಾಡಿ ಮಹಾತ್ಮ ಗಾಂಧೀಜಿ ಅವರ ತತ್ವ ಮತ್ತು ಆದರ್ಶಗಳನ್ನು ಅವಲೋಕನ ಮಾಡುವ ಜೊತೆಗೆ ರಾಷ್ಟ್ರೋತ್ಥಾನಕ್ಕೆ ಎಲ್ಲರೂ ಸಿದ್ಧರಾಗಬೇಕು. ಗಾಂಧೀಜಿ ನಮ್ಮನ್ನು ಬಿಟ್ಟು ಹೋಗಿದ್ದರೂ ಅವರ ಅವರ ತತ್ವಗಳು ಭಾರತೀಯ ತತ್ವಗಳಾಗಿ ನಮ್ಮ ಮುಂದಿದೆ. ಅವರು ತೋರಿದ ಸತ್ಯ, ಅಹಿಂಸೆಯ ದಾರಿಗಳು ಎಂದೂ ಪ್ರಸ್ತುತವಾಗಿದೆ ಎಂದರು.
ಪುತ್ತೂರು ಡಿವೈಎಸ್‍ಪಿ ಗಾನ ಪಿ ಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕಿ ಸುನಿತಾ ಅವರ ನೇತೃತ್ವದಲ್ಲಿ ಶ್ರೀರಾಮಕೃಷ್ಣ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ಹಾಗೂ ಭಜನೆ ನಡೆಯಿತು. ಅಗ್ನಿಶಾಮಕ ದಳದಿಂದ ಸೈರನ್ ಮೊಳಗಿಸಲಾಯಿತು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಟಿ. ರಮೇಶ್ ಬಾಬು, ಗಾಂಧಿ ವಿಚಾರ ವೇದಿಕೆಯ ಕಾರ್ಯದರ್ಶಿ ಚಿನ್ಮಯ ಕೃಷ್ಣ, ಸದಸ್ಯ ಸುಲೈಮಾನ್ ಕಲ್ಲರ್ಪೆ, ಗಾಂಧೀ ಕಟ್ಟೆ ಸಮಿತಿಯ ಸೈಯದ್ ಕಮಾಲ್ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ 1934ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಪುತ್ತೂರಿನಲ್ಲಿ ನಡೆದಾಡಿದ ಹಾದಿಯಲ್ಲಿ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು. ಪುತ್ತೂರಿನ ಇಂದಿನ ಗಾಂಧೀಕಟ್ಟೆಯಲ್ಲಿ ಮಹಾತ್ಮ ಗಾಂಧೀಜಿ ಮರದ ಬುಡದಲ್ಲಿ ವಿಶ್ರಮಿಸಿ ಬಳಿಕ ಅಲ್ಲಿಂದ ರಾಗಿದಕುಮೇರಿ ದಲಿತ ಕಾಲನಿಗೆ ಹೋಗಿದ್ದರು. ಈ ದಾರಿಯಲ್ಲಿ ಸುಮಾರು 3ಕಿ.ಮೀ ದೂರ ಗಾಂಧಿ ನಡಿಗೆ ಮಾಡಲಾಯಿತು.
ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಪ್ರೊ. ಝೇವಿಯರ್ ಡಿಸೋಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗಾಂಧಿ ಕಟ್ಟೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ನಿವೃತ್ತ ಸೈನಿಕ ರಮೇಶ್ ಬಾಬು ವಂದಿಸಿದರು.
