ಬಿಜೆಪಿಯಲ್ಲೇ ಉಳಿದುಕೊಂಡಿರುವ ಉ.ಪ್ರ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಪುತ್ರಿಯಿಂದ ಪಕ್ಷದ ಪರ ಪ್ರಚಾರ
"ಪಕ್ಷ ಆಜ್ಞೆ ನೀಡಿದರೂ ತಂದೆಯ ವಿರುದ್ಧ ಪ್ರಚಾರ ಮಾಡುವುದಿಲ್ಲ"

Photo: ANI
ಹೊಸದಿಲ್ಲಿ: ಇತ್ತೀಚೆಗೆ ಬಿಜೆಪಿಯನ್ನು ತ್ಯಜಿಸಿ ಸಮಾಜವಾದಿ ಪಕ್ಷವನ್ನುಸೇರಿಕೊಂಡಿರುವ ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ಪುತ್ರಿ, ಬಿಜೆಪಿ ಸಂಸದೆ ಸಂಘಮಿತ್ರ ಮೌರ್ಯ "ನಾನು ಪಕ್ಷವನ್ನು ತ್ಯಜಿಸುವುದಿಲ್ಲ ಹಾಗೂ ತನ್ನ ತಂದೆಯ ವಿರುದ್ಧ ಹೊರತುಪಡಿಸಿ ರಾಜ್ಯದಲ್ಲಿ ಎಲ್ಲ ಕಡೆಯೂ ಪ್ರಚಾರ ಮಾಡುವೆ'' ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನನಗೆ ತಂದೆಯಿದ್ದಂತೆ ಎಂದು ಅವರು ಈ ಹಿಂದೆ ಹೇಳಿದ್ದ ಸಂಘಮಿತ್ರ, ಪಕ್ಷದ ಆಜ್ಞೆ ಹೊರತಾಗಿಯೂ ತನ್ನ ತಂದೆಯ ವಿರುದ್ಧ ಪ್ರಚಾರ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯೋಗಿ ಆದಿತ್ಯನಾಥ್ ಸರಕಾರದ ಮಂತ್ರಿಯಾಗಿದ್ದ ಹಾಗೂ ಬಿಜೆಪಿಯ ಅತ್ಯಂತ ಪ್ರಮುಖ ರಾಜ್ಯ ನಾಯಕರಲ್ಲಿ ಒಬ್ಬರಾದ ಮೌರ್ಯ ಅವರು ಇತ್ತೀಚೆಗೆ ಬಿಜೆಪಿಯನ್ನು ತೊರೆದಿದ್ದರು ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಸೇರಿದ್ದರು. ಮೌರ್ಯ ಅವರು ಪದ್ರೌನಾದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
ತಮ್ಮ ತಂದೆ ಈ ನಿರ್ಧಾರವನ್ನು ಕೈಗೊಳ್ಳುವ ಮೊದಲು ತನ್ನೊಂದಿಗೆ ಈ ವಿಷಯವನ್ನು ಚರ್ಚಿಸಿಲ್ಲ. ಆದರೆ ಬಿಜೆಪಿ ತೊರೆಯುವಂತೆ ತನ್ನ ಮೇಲೆ ಯಾವುದೇ ಒತ್ತಡವಿಲ್ಲ’’ ಎಂದು ಬದೌನ್ ನಿಂದ ಬಿಜೆಪಿಯ ಮೊದಲ ಸಂಸದರಾಗಿರುವ ಸಂಘಮಿತ್ರ ಮೌರ್ಯ ಅವರು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 37ರ ವಯಸ್ಸಿನ ಮೌರ್ಯ 2019 ರಲ್ಲಿ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಅವರನ್ನು ಸೋಲಿಸಿದ್ದರು.
"ಬಿಜೆಪಿ ತೊರೆಯಲು ನನಗೆ ಒತ್ತಡವಿಲ್ಲ. ನಾನು ಬಿಜೆಪಿಯೊಂದಿಗೆ ಇದ್ದೇನೆ ಹಾಗೂ ಇರುತ್ತೇನೆ. ಕುಟುಂಬ ಜೀವನ ಹಾಗೂ ರಾಜಕೀಯ ಜೀವನ ಸಂಪೂರ್ಣವಾಗಿ ವಿಭಿನ್ನವಾಗಿದೆ. ನಾನು ಇಡೀ ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ... ಆದರೆ ಪಕ್ಷದ ಆಜ್ಞೆಯ ಮೇರೆಗೆ ನಾನು ನನ್ನ ತಂದೆ ವಿರುದ್ಧ ಪ್ರಚಾರ ಮಾಡುವುದಿಲ್ಲ’’ ಎಂದರು.
ಪರಿಸ್ಥಿತಿಯು ತಮಗೆ ಮತ್ತು ಪಕ್ಷಕ್ಕೆ ಸಮಸ್ಯೆಗಳನ್ನು ಉಂಟುಮಾಡುತ್ತದೆಯೇ ಎಂಬ ಪ್ರಶ್ನೆಗೆ, ಇದುವರೆಗೆ ಪಕ್ಷವು ನನ್ನಿಂದ ಯಾವುದೇ ವಿವರಣೆಯನ್ನು ಕೇಳಿಲ್ಲ. ನಾನು ಪಕ್ಷಕ್ಕೆ ನಿಷ್ಠೆಯಾಗಿರುವ ಬಗ್ಗೆ ಯಾವುದೇ ಪ್ರಮಾಣಪತ್ರವನ್ನು ನೀಡಬೇಕಾಗಿಲ್ಲ" ಎಂದು ಮೌರ್ಯ ಎನ್ಡಿಟಿವಿಗೆ ತಿಳಿಸಿದ್ದಾರೆ.







