ಹೆಜಮಾಡಿ ಕೋಡಿಯಲ್ಲಿ ಬೀಚ್ ಸ್ವಚ್ಛತಾ ಅಭಿಯಾನ

ಪಡುಬಿದ್ರಿ: ಸ್ವಚ್ಚತಾ ಕಾರ್ಯಕ್ರಮಗಳು ನಿರಂತರವಾಗಿರಬೇಕು. ತಮ್ಮ ದಿನನಿತ್ಯದ ಕಾರ್ಯದಲ್ಲೂ ಸ್ವಚ್ಛತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ನಮ್ಮ ಮನೆಯಿಂದಲೇ ಆರಂಭವಾಗಬೇಕಿರುವುದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಎಂದು ಲಾಲಾಜಿ ಆರ್. ಮೆಂಡನ್ ಹೇಳಿದರು. ಈ ಮೂಲಕ ಪರಿಸರ ಸ್ವಚ್ಛತೆಯಿಂದ ಇರಲು ಸಾಧ್ಯ ಎಂದು ಎಂದು ಆರ್. ಮೆಂಡನ್ ಅಭಿಪ್ರಾಯಪಟ್ಟರು.
ಅವರು ರವಿವಾರ ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ, ಹೆಜಮಾಡಿ ಗ್ರಾಮ ಪಂಚಾಯಿತಿ, ಕರಾವಳಿ ಯುವಕ - ಯುವತಿ ವೃಂದ ಹೆಜಮಾಡಿ, ಮೂಲ್ಕಿಯ ವಿಜಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೊಜನಾ ಘಟಕ, ಎನ್‍ಸಿಸಿ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಹೆಜಮಾಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ, ಯುವ ಜನತೆಗೆ ಜಲ ಜಾಗೃತಿ ಅಭಿಯಾನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಮಾವಾಸೆ ಕರಿಯ ಕಡಲ ಕಿನಾರೆಯಲ್ಲಿನ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಮಾತನಾಡಿ, ವಿದ್ಯಾರ್ಥಿಗಳು ಸದಾ ಸ್ವಚ್ಛತೆಯ ಧ್ಯೇಯವನ್ನು ಸದಾ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಬೀಚ್ ಸ್ವಚ್ಛತಾ ಆಂದೋಲನವಾಗಿ ಮುಂದುವರಿದಿರುವ ಈ ಕಾರ್ಯಕ್ರಮದ ಫಲಶ್ರುತಿಯೂ ನಮಗೆ ಕಾಣಸಿಗುತ್ತಿದೆ. ಆದರೂ ಇನ್ನೂ ಕಸಮುಕ್ತವಾಗಿಲ್ಲ. ಇದನ್ನು ಮಾಡುತ್ತಿರುವವರೂ ನಮ್ಮಂತಹಾ ವಿದ್ಯಾವಂತರೇ ಆಗಿದ್ದಾರೆ. ಸ್ವಚ್ಛತೆಯ ತತ್ವವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಕೊಳ್ಳೋಣ ಎಂದರು.
ಮುಲ್ಕಿಯ ವಿಜಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಎಲ್ಲಾ ಯುವಕರಿಗಾಗಿ ಜಲ ಜಾಗೃತಿ ಅಭಿಯಾನದ ತರಬೇತಿಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ. ಎಂ. ರೆಬೆಲ್ಲೋ ಅವರು ನೀಡಿದರು.
ಸಭೆಯನ್ನು ಉದ್ದೇಶಿಸಿ ಉಡುಪಿ ಜಿಲ್ಲಾ ಯುವ ಅಧಿಕಾರಿ, ನೆಹರೂ ಯುವ ಕೇಂದ್ರದ ವಿಲ್ರೆಡ್ ಡಿ`ಸೋಜ, ಪ್ರಾಧ್ಯಾಪಕ ವೆಂಕಟೇಶ್ ಭಟ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್ ಮಾತಾಡಿದರು.
ವೇದಿಕೆಯಲ್ಲಿ ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ವಿಜಯಾ ಕಾಲೇಜು ಆಡಳಿತ ಮಂಡಳಿ ಸದಸ್ಯ ಮಾಧವ ಸನಿಲ್, ಅನಿವಾಸಿ ಉದ್ಯಮಿ ಹರೀಶ್ ಕೋಟ್ಯಾನ್, ಹಿರಿಯರಾದ ನಾರಾಯಣ ಕೆ. ಮೆಂಡನ್, ಹೇಮಾನಂದ ಕೆ. ಪುತ್ರನ್, ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡುರಂಗ ಸಿ. ಕರ್ಕೇರ, ಲೀಲೇಶ್ ವಿ. ಸುವರ್ಣ, ರೇಶ್ಮಾ ಎ. ಮೆಂಡನ್, ಕರಾವಳಿ ಯುವಕ - ಯುವತಿ ವೃಂದದ ಅಧ್ಯಕ್ಷ ಅಶೋಕ್ ವಿ. ಕೆ. ಮತ್ತಿತರರು ಉಪಸ್ಥಿತರಿದ್ದರು.
ಸಂಪತ್ ಕುಮಾರ್ ಹೆಜಮಾಡಿ ಸ್ವಾಗತಿಸಿದರು. ಜಿತೇಂದ್ರ ವಿ. ರಾವ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಶರಣ್ ಕುಮಾರ್ ಮಟ್ಟು ವಂದಿಸಿದರು.