ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವು: ನ್ಯಾಯಾಧೀಶರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ

ಬೆಂಗಳೂರು, ಜ. 30: `ರಾಯಚೂರಿನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ 73ನೆ ಗಣರಾಜ್ಯೋತ್ಸವ ಧ್ವಜಾರೋಹಣ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ಹೇಳಿಕೆ ಕುರಿತು ತನಿಖೆ ಹಾಗೂ ಕ್ರಮ ಕೈಗೊಳ್ಳಬೇಕು' ಎಂದು ಕೋರಿ ರಾಜ್ಯಪಾಲರಿಗೆ, ಶಾಸಕ ಎಂ.ಪಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
`ನ್ಯಾಯಾಧೀಶರು ನಡೆದುಕೊಂಡ ವರ್ತನೆ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮದಲ್ಲಿ ವರದಿಯಾಗಿರುತ್ತದೆ. ಈ ಘಟನೆ ಸಾರ್ವಜನಿಕರಲ್ಲಿ ನೋವುಟ್ಟು ಮಾಡಿದೆ. ಈ ಹಿನ್ನಲೆಯಲ್ಲಿ ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕು' ಎಂದು ಮನವಿ ಮಾಡಿರುವ ಕುಮಾರಸ್ವಾಮಿ, `ಇಂದು ಪ್ರಜಾಪ್ರಭುತ್ವ ಉಳಿದಿದೆ ಎಂದರೆ ಅದು ಅಂಬೇಡ್ಕರ್ ಅವರಿಂದ. ಪ್ರಜಾಪ್ರಭುತ್ವಕ್ಕೆ ಭದ್ರಬುನಾದಿ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ' ಎಂದು ತಿಳಿಸಿದ್ದಾರೆ.
`ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಒಂದು ಜನಾಂಗ, ಸಮಾಜ ತಮ್ಮ ಹಕ್ಕು ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂಬುದನ್ನು ಸಾರಿದ ಅಂಬೇಡ್ಕರ್ ಅವರನ್ನು ನ್ಯಾಯಾಂಗ ಉನ್ನತ ಸ್ಥಾನದಲ್ಲಿ ನೋಡುತ್ತವೆ. ಆದರೆ, ಜ.26ರಂದು ರಾಯಚೂರು ಜಿಲ್ಲಾ ನ್ಯಾಯಲಯ ಅವರಣದಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ಅವರ ಭಾವಚಿತ್ರವನ್ನು ಸ್ಥಳದಿಂದ ತೆರವುಗೊಳಿಸುವಂತೆ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಆದೇಶಿಸಿ ಅವಮಾನ ಮಾಡಿರುವುದು ಅತ್ಯಂತ ಖಂಡನೀಯವಾದದ್ದು' ಎಂದು ಅವರು ಹೇಳಿದ್ದಾರೆ.







