ಹತ್ರಸ್ ಅತ್ಯಾಚಾರ ಕುರಿತ ಪ್ರಶ್ನೆ: ಸಂದರ್ಶನದಿಂದ ಎದ್ದು ಹೋದ ಬಿಜೆಪಿ ಅಭ್ಯರ್ಥಿ

ಲಕ್ನೋ: ಹಥ್ರಸ್ ಗ್ಯಾಂಗ್‌ರೇಪ್ ಹಾಗೂ ಕೊಲೆ ಪ್ರಕರಣದ ಕುರಿತಂತೆ ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರದ ಮೇಲೆ ಸಾಕಷ್ಟು ಆರೋಪ ಇರುವ ನಡುವೆ, ಹಥ್ರಸ್ ಪ್ರಕರಣದ ಕುರಿತ ಪ್ರಶ್ನೆಗೆ ಮಾಧ್ಯಮದ ಸಂದರ್ಶನವೊಂದರಿಂದ ಬಿಜೆಪಿ ಅಭ್ಯರ್ಥಿಯೊಬ್ಬರು ಅರ್ಧದಲ್ಲೇ ಎದ್ದು ಹೋದ ಪ್ರಸಂಗ ನಡೆದಿದೆ.
ಮುಂಬರುವ ಯುಪಿ ಚುನಾವಣೆಯಲ್ಲಿ ಆಗ್ರಾ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಕಣದಲ್ಲಿರುವ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ ಅವರು ನ್ಯೂಸ್ ಲಾಂಡ್ರಿ ಸಂದರ್ಶನದಿಂದ ಅರ್ಧದಲ್ಲೇ ಎದ್ದು ಹೋದವರು. ಹಥ್ರಸ್ ಪ್ರಕರಣ ಸೇರಿದಂತೆ ಉತ್ತರಪ್ರದೇಶದಲ್ಲಿ ಮಹಿಳೆಯರ ಹಾಗೂ ದಲಿತರ ವಿರುದ್ಧ ದೌರ್ಜನ್ಯದ ಕುರಿತು ನ್ಯೂಸ್ ಲಾಂಡ್ರಿ ವರದಿಗಾರ ಕೇಳಿದ ಪ್ರಶ್ನೆಗೆ ಕೆಂಡಾಮಂಡಲರಾದ ರಾಣಿ, ಸಂದರ್ಶನವನ್ನು ಅರ್ಧದಲ್ಲೇ ತೊರೆದಿದ್ದಾರೆ.
ಹಿಂದುಳಿದವರು, ದಲಿತರು, ಮಹಿಳೆಯರು ಮತ್ತು ರೈತರಿಗಾಗಿ ಪ್ರಧಾನಿ ಅವರು ಕೆಲಸ ಮಾಡುತ್ತಿದ್ದಾರೆ, ಇದು ಉತ್ತಮ ಆಡಳಿತವಾಗಿದೆ, ಇದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದುವರಿಸುತ್ತಿದ್ದಾರೆ, ಗೂಂಡಾ ರಾಜ್ ಅಂತ್ಯಗೊಂಡಿದೆ, ಆದ್ದರಿಂದ ಭದ್ರತೆಯೂ ಉತ್ತಮವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಹತ್ರಾಸ್ ಮತ್ತು ಆಗ್ರಾದ ಪೊಲೀಸ್ ಕಸ್ಟಡಿಯಲ್ಲಿ ಅರುಣ್ ವಾಲ್ಮೀಕಿ ಸಾವನ್ನಪ್ಪಿದ ಪ್ರಕರಣದಲ್ಲಿ ಆಡಳಿತ ಮತ್ತು ಸರ್ಕಾರದ ಪಾತ್ರದ ಕುರಿತು ಪ್ರಶ್ನಿಸಿದಾಗ, "ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಹತ್ರಾಸ್ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿ ಸಮಜಾಯಿಷಿ ನೀಡಲು ಅವರು ಪ್ರಯತ್ನಿಸಿದ್ದಾರೆ.
ಹತ್ರಾಸ್‌ನಲ್ಲಿ ಸಂತ್ರಸ್ತೆಯ ದೇಹವನ್ನು ಕುಟುಂಬಸ್ಥರ ಒಪ್ಪಿಗೆಯಿಲ್ಲದೆ ತರಾತುರಿಯಲ್ಲಿ ಸುಟ್ಟುಹಾಕಿದ ಬಗ್ಗೆ ನಾವು ಬೇಬಿ ರಾಣಿಗೆ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸಿದೆವು, ಆದರೆ ಅವರು ಅದರ ಬಗ್ಗೆ ಕೋಪಗೊಂಡು ಸಂದರ್ಶನವನ್ನು ಮಧ್ಯದಲ್ಲಿಯೇ ತೊರೆದು ಹೋಗಿದ್ದಾರೆ. ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಲಾಗುತ್ತಿದೆ. ಈ ವಿಷಯದ ಬಗ್ಗೆ ಯಾವುದೇ ಅಭಿಪ್ರಾಯಗಳನ್ನು ನೀಡಲು ಬಯಸುವುದಿಲ್ಲ ಎಂದು ಅವರು ಹೇಳಿರುವುದಾಗಿ ನ್ಯೂಸ್ ಲಾಂಡ್ರಿ ವರದಿ ಮಾಡಿದೆ.







