ಬಿಜೆಪಿಯಿಂದ ಯಾರೂ ಕಾಂಗ್ರೆಸ್‍ಗೆ ಹೋಗುವುದಿಲ್ಲ: ಸಚಿವ ಗೋವಿಂದ ಕಾರಜೋಳ

ಬಾಗಲಕೋಟೆ, ಜ. 30: `ದೇಶದ 27 ರಾಜ್ಯಗಳಲ್ಲಿಯೂ ಅಧಿಕಾರ ಕಳೆದುಕೊಂಡಿರುವ ಮುಳುಗುತ್ತಿರುವ ಹಡಗು ಕಾಂಗ್ರೆಸ್ ಪಕ್ಷ. ಬಿಜೆಪಿ ಯಾವೊಬ್ಬ ಶಾಸಕರೂ ಆ ಪಕ್ಷಕ್ಕೆ ಹೋಗುವುದಿಲ್ಲ' ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕಾಂಗ್ರೆಸ್ ಪಕ್ಷದ ಮುಖಂಡರು ಸುಖಾ ಸುಮ್ಮನೆ ಅವರು ಬರುತ್ತಾರೆ. ಇವರು ಬರುತ್ತಾರೆಂದು ಭ್ರಮೆ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ವಲಸಿಗರು ಎಂಬ ಭಾವನೆ ಇಲ್ಲ, ಎಲ್ಲರೂ ಬಿಜೆಪಿಗರೇ.. ಅವರು ವಲಸೆ ಬಂದಿದ್ದಾರೆ ಎನ್ನುವುದರಲ್ಲಿ ಅರ್ಥವಿಲ್ಲ. ಪಕ್ಷಕ್ಕೂ ಮತ್ತು ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಬಂದು ಬಿಜೆಪಿ ಸದಸ್ಯರಾಗಿದ್ದು, ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟಪಡಿಸಿದರು.
`ನಮ್ಮ ಜೀವ ಇರೋವರೆಗೂ ಇಲ್ಲೇ ಇರುತ್ತೇವೆ ಎಂದು ಅವರೇ ಹೇಳಿಕೊಂಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏನು ಮಾಡಿಲ್ಲವೆಂದು ಹೇಳಿ, ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಅನ್ನು ಹೀನಾಯವಾಗಿ ಸೋಲಿಸಿದರು. ಅದನ್ನ ಅವರು ಅರ್ಥಮಾಡಿಕೊಳ್ಳಬೇಕು. ನಾವು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದೇವೆ. ಪ್ರವಾಹ, ಕೋವಿಡ್ ಮಧ್ಯೆ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.
`ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಲ ಮುಖಂಡರು ಚಹಾ ಸೇವಿಸಲು ಸೇರಿದರೆ ಮಾಧ್ಯಮದಲ್ಲಿ ಭಿನ್ನಾಭಿಪ್ರಾಯ ಎಂಬ ಸುದ್ದಿ ಬಿತ್ತರವಾಗುತ್ತದೆ. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದು, ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲ್ಲಿದ್ದೇವೆ' ಎಂದು ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.







