ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಭರ್ತಿಗೆ ನಟ ಶಿವರಾಜ್ ಕುಮಾರ್ ಮನವಿ

ನಟ ಶಿವರಾಜ್ ಕುಮಾರ್
ಮೈಸೂರು,ಜ.30: ರಾಜ್ಯದ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಹಿರಿಯ ನಟ ಶಿವರಾಜ್ ಕುಮಾರ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಹೊಸ ಹೊಸ ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ. ಆದರೆ ಹೊಸ ಸಿನೆಮಾಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಹಾಗೂ ವಿತರಕರು ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಕೊರೊನ ಹಿನ್ನೆಲೆ ಥಿಯೇಟರ್ ಗಳಿಗೆ ಶೇಕಡಾ 50-50 ಪ್ರೇಕ್ಷಕರಿಗೆ ಮಾತ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಹೆಚ್ಚು ಪ್ರೇಕ್ಷಕರಿಲ್ಲದಿದ್ದರೆ ಲಾಸ್ ಆಗುವ ಕಾರಣ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಇನ್ನು ಹೊಸ ಸಿನಿಮಾ ಬಿಡುಗಡೆ ಆಗದ ಕಾರಣ ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳ ಸಿನಿಮಾ ಥಿಯೇಟರ್ ಗಳು ಬಾಗಿಲು ಹಾಕಿವೆ' ಎಂದು ಶಿವರಾಜ್ ಕುಮಾರ್ ಹೆಲಿದ್ದಾರೆ.
ಸಿನೆಮಾ ಥಿಯೇಟರ್ ಗಳ ವ್ಯಾಪಾರ ಅವಲಂಬಿಸಿ ನೂರಾರು ಕುಟುಂಬಗಳು ಜೀವನ ಮಾಡುತ್ತಿದ್ದವು. ಆದರೆ ಈಗ ಸಿನಿಮಾ ಥಿಯೇಟರ್ ಬಾಗಿಲು ಹಾಕಿರುವ ಕಾರಣ ಸಾವಿರಾರು ಜನರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಿಗೆ ರಿಲ್ಯಾಕ್ಸ್ ಕೊಟ್ಟು ಸಿನಿಮಾ ಥಿಯೇಟರ್ ಗಳಿಗೆ ಮಾತ್ರ ನಿರ್ಬಂಧ ಹೇರಿರುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶೀಘ್ರವೇ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅವರು ನಮ್ಮ ಬೇಡಿಕೆ ಈಡೇರಿಸುತ್ತಾರೆಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.







