ಪ್ರತಾಪ್ ಸಿಂಹ ಜಿ.ಪಂ.ಚುನಾವಣೆಯಲ್ಲಿ ಗೆದ್ದು ಬರಲಿ: ಬಿಜೆಪಿ ಶಾಸಕ ಎಲ್.ನಾಗೇಂದ್ರ ತಿರುಗೇಟು

ಶಾಸಕ ಎಲ್.ನಾಗೇಂದ್ರ ಸಂಸದ ಪ್ರತಾಪ್ ಸಿಂಹ
ಮೈಸೂರು,ಜ.30: ಮೈಸೂರಲ್ಲಿ ಸಂಸದ- ಶಾಸಕರ ಮಧ್ಯೆ ಜಟಾಪಟಿ ತಾರಕಕ್ಕೇರಿದೆ. ತಾಕತ್ತಿದ್ದರೆ ಪ್ರತಾಪ್ ಸಿಂಹ ಅವರ ಊರಿನ ಯಾವುದಾದರೊಂದು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಬಿಜೆಪಿ ಶಾಸಕ ಎಲ್.ನಾಗೇಂದ್ರ ನೇರ ಸವಾಲು ಹಾಕಿದ್ದಾರೆ.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಮ್ಮೂರಲ್ಲಿ ನಾನು ರಾಜಕಾರಣ ಮಾಡಿದ್ದೇನೆ. 25 ವರ್ಷ ಜನರ ಜತೆ ಇದ್ದೇನೆ. ನಾನು ನಿಮ್ಮ ರೀತಿ ಎಲ್ಲಿಂದಲೋ ಬಂದು ರಾಜಕಾರಣ ಮಾಡಿಲ್ಲ,.ನಿಮ್ಮೂರಿನ ಒಂದು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಲ್ಲಿ ಗೆದ್ದು ತೋರಿಸಿ. ನೀವು ಸಂಸದರಾಗಿ 7 ವರ್ಷ ಆಯ್ತು. ನಿಮ್ಮ ನಾಯಕತ್ವದಲ್ಲಿ ಎಷ್ಟು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗೆಲ್ಲಿಸಿದ್ದೀರಿ.ನೀವೇ ಮುಂದೆ ನಿಂತುಕೊಂಡು 6 ಕಾರ್ಪೊರೇಟರ್ ಗಳಿಗೆ ಟಿಕೆಟ್ ಕೊಡಿಸಿದಿರಲ್ಲ ಎಷ್ಟು ಜನ ಗೆಲ್ಲಿಸಿದಿರಿ? ಹಾದಿ ಬೀದಿಯಲ್ಲಿ ನಿಂತು ಮಾತನಾಡೋದು ನಿಮ್ಮ ರಾಜಕಾರಣ' ಎಂದು ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮನೆ ಮನೆಗೆ ಗ್ಯಾಸ್ ಪೈಪ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಂಪನಿಯವರು ವೈಯಕ್ತಿಕವಾಗಿ ಭೇಟಿ ಮಾಡಿಲ್ಲದಿರಬಹುದು. ಅದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿರುಬಹುದು ಎಂಬ ಸಂಸದ ಪ್ರತಾಪಸಿಂಹ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಚಾಮುಂಡೇಶ್ವರಿ ಆಣೆಗೂ ಇದು ಕಮಿಷನ್ ಗಾಗಿ ಅಲ್ಲ . ಜನರ ಹಿತದೃಷ್ಟಿಯಿಂದಾಗಿ ನಾನು ಮಾತನಾಡುತ್ತಿದ್ದೇನೆ . ನನಗೆ ಕಮಿಷನ್ ವಿಚಾರ ಗೊತ್ತಿಲ್ಲ. ಇದು ನನ್ನೂರು ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತಿದೆ. ಗ್ಯಾಸ್ ಯೋಜನೆ ಕಾಮಗಾರಿ ವೇಳೆ ಅನಾಹುತ ಆದರೆ ಯಾರು ಜವಾಬ್ದಾರಿ. ಬೇರೆ ಬೇರೆ ಕಡೆ ಅನಾಹುತಗಳು ಆಗಿವೆ. ಅನಾಹುತಕ್ಕೆ ಯಾರು ಹೊಣೆ ಅಂತ ಕೇಳಿದರೆ ತಪ್ಪಾ ? ಸಂಸದ ಪ್ರತಾಪಸಿಂಹ ಅವರಿಗೆ ಏಕೆ ಕಂಪನಿ ಮೇಲೆ ಒಲವು ? ಕಂಪನಿಯವರು ನೇರವಾಗಿ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಲಿ. ಅದರ ಡೆಮೋ ನೀಡಲಿ ಎಂದರು.







