ಬೆಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ; ಶಿಕ್ಷಕಿ ಸ್ಥಳದಲ್ಲೇ ಮೃತ್ಯು

ಬೆಂಗಳೂರು, ಜ. 30: ರಸ್ತೆ ಗುಂಡಿಯಿಂದಾಗಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಟ್ಟಿಗೆಪಾಳ್ಯದ ಶರ್ಮಿಳಾ(38) ಮೃತಪಟ್ಟಿದ್ದು, ಈಕೆ ಶಾಲಾ ಶಿಕ್ಷಕಿ ಎಂದು ತಿಳಿದುಬಂದಿದೆ. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತು ತಾವರೆಕೆರೆ ಕಡೆಗೆ ಶಿಕ್ಷಕಿ ತೆರಳುತ್ತಿದ್ದರು. ಕಾವೇರಿ ನೀರಿನ ಪೈಪ್‍ಲೈನ್ ಅಳವಡಿಕೆಗಾಗಿ ಮಾಗಡಿ ಮುಖ್ಯರಸ್ತೆಯ ಅಂಜನಾನಗರದಿಂದ ದೊಡ್ಡ ಗೊಲ್ಲರಹಟ್ಟಿಯವರೆಗೆ ರಸ್ತೆಯನ್ನು ಅಗೆದು ಮುಚ್ಚದೆ ಹಾಗೇ ಬಿಡಲಾಗಿದೆ.
ಇಲ್ಲಿನ ಹರಿಹರ ಪುತ್ರ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬೈಕ್ ಸವಾರ ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿದಾಗ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಹಿಂಬದಿಯಿಂದ ಬಂದ ಬೊಲೆರೋ ವಾಹನ ಆಕೆಯ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೊಲೆರೋ ಚಾಲಕ ಮಾದೇಶ್‍ನನ್ನು ಬಂಧಿಸಿದ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.








