ಕನ್ನಡ ವಿವಿಯನ್ನು ವಿಶೇಷ ಅನುದಾನದ ಮೂಲಕ ಮುನ್ನಡೆಸಬೇಕು: ಡಾ.ಬಂಜಗೆರೆ ಜಯಪ್ರಕಾಶ್

ಬೆಂಗಳೂರು, ಜ. 30: `ಇತ್ತೀಚಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಕಳೆಗುಂದಿದೆ. ಕನ್ನಡ ಭಾಷೆಗಾಗಿ ಹುಟ್ಟಿದ ಕನ್ನಡ ವಿವಿಯನ್ನು ವಿಶೇಷ ಅನುದಾನದ ಮೂಲಕ ಸರಕಾರವು ಮುನ್ನಡೆಸಬೇಕು' ಎಂದು ಹಿರಿಯ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಆಗ್ರಹಿಸಿದ್ದಾರೆ.
ರವಿವಾರ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಆಯೋಜಿಸಿದ್ದ `ಕನ್ನಡ ವಿಶ್ವವಿದ್ಯಾಲಯ ಸ್ಥಿತಿ-ಗತಿ' ಎಂಬ ಆನ್‍ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಸರಕಾರವು ಕನ್ನಡ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಹಾಗೂ ಶಿಷ್ಯವೇತನವನ್ನು ನೀಡುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯವಾಗಿದೆ. ಸರಕಾರವು ಇದನ್ನು ಪರಿಗಣಿಸಿ ವಿವಿಯ ಅಭಿವೃದ್ಧಿಗಾಗಿ ವಿಶೇಷ ಅನುದಾನವನ್ನು ನೀಡಬೇಕು. ಸರಕಾರವು ಸ್ವತಃ ಸ್ಪಂದಿಸದ ಹೊರತು, ವಿವಿಯು ಅಭಿವೃದ್ಧಿ ಹೊಂದುವುದಿಲ್ಲ' ಎಂದು ತರಾಟೆಗೆ ತೆಗೆದುಕೊಂಡರು.
`ರಾಜ್ಯ ಸರಕಾರವು ಕೇಂದ್ರವನ್ನು ಒಪ್ಪಿಸುವ ನಿಟ್ಟಿನಲ್ಲಿ ಕನ್ನಡವನ್ನು ಕಡೆಗಣಿಸಬಾರದು. ಕನ್ನಡ ವಿವಿಯ ಶೋಚನಿಯ ಸ್ಥಿತಿ ಆಡಳಿತ ದೋಷ ಕಾರಣ ಎಂದು ಪರಿಗಣಿಸಬಾರದು. ಸಮಗ್ರ ಅಭಿವೃದ್ಧಿಗಾಗಿ ಸರಕಾರವು ಶ್ರಮಿಸಬೇಕು' ಎಂದು ಅವರು ಹೇಳಿದರು.
ಹಿರಿಯ ಚಿಂತಕಿ ಡಾ. ಕೆ. ಶರೀಷಾ ಮಾತನಾಡಿ, `ಕನ್ನಡ ವಿವಿಯಲ್ಲಿ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ವಿವಿಯ ಸಣ್ಣ-ಪುಟ್ಟ ಕೆಲಸಗಳಿಗೆ ವಿದ್ಯಾರ್ಥಿವೇತನವನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಅಪರಾಧ ಎಂದು ಬಿಂಬಿಸಿದರೂ ತಪ್ಪಲ್ಲ. ಬುಡಕಟ್ಟು ಹಾಗೂ ಮಹಿಳೆಯರ ಸಂಶೋಧನೆಗೆ ವಿಶೇಷ ಕೊಡುಗೆಯನ್ನು ನೀಡಿರುವ ಕನ್ನಡ ವಿವಿಗೆ ಕಳೆದ ಮೂರು ವರ್ಷಗಳಿಂದ ಪಿಎಚ್‍ಡಿ ಪ್ರವೇಶವನ್ನು ನಡೆಸುತ್ತಿಲ್ಲ. ಇದಕ್ಕೆಲ್ಲಾ ಅನುದಾನ ಕೊರತೆಯೆ ಕಾರಣವಾಗಿದೆ' ಎಂದರು.
ಸಂಸ್ಕೃತ ವಿವಿಯನ್ನು ಸ್ಥಾಪಿಸಲು ಮುಂದಾಗಿರುವ ಸರಕಾರವು ಕನ್ನಡ ವಿವಿಯ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಬೇಕು. ಬೇರೆಬೇರೆ ಆಡಳಿತ ಶಿಸ್ತನ್ನು ಸ್ಥಾಪಿಸಬೇಕಾಗಿದೆ. ರಾಜ್ಯ ಸರಕಾರವು ಸ್ಥಳೀಯ, ಆಡಳಿತ, ಅನುದಾನದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ, ಅವನತಿಯತ್ತ ಸಾಗುತ್ತಿರುವ ವಿವಿಯನ್ನು ಉನ್ನತಿಯತ್ತ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.







