ಸ್ವಾತಂತ್ರ್ಯ ಹೋರಾಟಗಾರರ ಹೋಲೋಗ್ರಾಂ ಪ್ರತಿಮೆ ಸ್ಥಾಪಿಸುವಂತೆ ರಾಷ್ಟ್ರಪತಿಗೆ ಪತ್ರ

ಹೊಸದಿಲ್ಲಿ, ಜ. 30: ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಶಾಶ್ವತ ಪ್ರತಿಮೆ ಸ್ಥಾಪಿಸುವ ಬದಲು ಆವರ್ತನಗೊಳ್ಳುವ ಸ್ವಾತಂತ್ರ ಹೋರಾಟಗಾರರ ಹೋಲೊಗ್ರಾಂ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿ ಲೇಖಕರು, ವಕೀಲರು ಹಾಗೂ ಇತರ ವೃತ್ತಿಪರರನ್ನು ಒಳಗೊಂಡ 136 ಶಿಕ್ಷಣ ತಜ್ಞರ ಗುಂಪು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಮನವಿ ಮಾಡಿದೆ. ‘‘ಇಂತಹ ಕ್ರಮ ಭಾರತದಾದ್ಯಂತ ಏಕತೆ ಹಾಗೂ ಸೌಹಾರ್ದತೆಯನ್ನು ಕೂಡ ಉತ್ತೇಜಿಸುತ್ತದೆ. ನಮ್ಮ ಸ್ವಾತಂತ್ರ್ಯಹೋರಾಟ (ಮಹಿಳೆಯರು ಹಾಗೂ ಪುರುಷರು)ಗಾರರಿಗೆ ಗೌರವ ನೀಡುವುದನ್ನು ದೇಶಾದ್ಯಂತದ ಜನರು ಸ್ವಾಗತಿಸುತ್ತಾರೆ. ಈ ಸಲಹೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಈ ದೇಶದ ನಾಗರಿಕರಾದ ನಾವು ಭರವಸೆ ಹೊಂದಿದ್ದೇವೆ’’ ಎಂದು ಪತ್ರದಲ್ಲಿ ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್‌ನ ಮೇಲಾವರಣದ ಕೆಳಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೋಲೋಗ್ರಾಂ ಪ್ರತಿಮೆಯನ್ನು ಜನವರಿ 23ರಂದು ಅನಾವರಣಗೊಳಿಸಿದ್ದರು. ಗ್ರಾನೈಟ್ ಪ್ರತಿಮೆ ಸಿದ್ಧವಾದ ಕೂಡಲೇ ಶೀಘ್ರದಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಅವರು ಹೇಳಿದ್ದರು.





