ಮಹಾತ್ಮಾ ಗಾಂಧಿ ಹತ್ಯೆ ದಿನದಂದೇ “ಗೋಡ್ಸೆ-ಆಪ್ಟೆ ಸ್ಮೃತಿ ದಿವಸ್” ನಡೆಸಿದ ಹಿಂದೂ ಮಹಾಸಭಾ !
ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಳಿಚರಣ್ ಮಹಾರಾಜ್ಗೆ 'ಗೋಡ್ಸೆ-ಆಪ್ಟೆ ಭಾರತ ರತ್ನ' ಪ್ರಶಸ್ತಿ

ನಾಥೂರಾಂ ಗೋಡ್ಸೆ (PTI)
ರಾಯ್ಪುರ: ಮಹಾತ್ಮಾ ಗಾಂಧಿ ಹತ್ಯೆಯಾದ ದಿನದಂದು (ರವಿವಾರ) ಹಿಂದೂ ಮಹಾಸಭಾವು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಅವರ ಹಂತಕ ನಾಥೂರಾಂ ಗೋಡ್ಸೆ ಮತ್ತು ಗಾಂಧಿ ಹತ್ಯೆಯ ಪ್ರಕರಣದ ಸಹ ಆರೋಪಿ ನಾರಾಯಣ ಆಪ್ಟೆಗೆ "ಗೋಡ್ಸೆ-ಆಪ್ಟೆ ಸ್ಮೃತಿ ದಿವಸ್" ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದೆ ಎಂದು indianexpress.com ವರದಿ ಮಾಡಿದೆ.
ಈ ವೇಳೆ, ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ನಡೆದ ಧರ್ಮ ಸಂಸದ್ನಲ್ಲಿ ಮಹಾತ್ಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಕಳೆದ ಡಿಸೆಂಬರ್ನಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದ ಕಾಳಿಚರಣ್ ಮಹಾರಾಜ್ ಮತ್ತು ನಾಲ್ವರು ಇತರೆ ನಾಯಕರಿಗೆ ಹಿಂದೂ ಮಹಾಸಭಾ “ಗೋಡ್ಸೆ-ಆಪ್ಟೆ ಭಾರತ ರತ್ನ” ನೀಡಿ ಗೌರವಿಸಿದೆ.
“ಭಾರತವನ್ನು ಪಾಕಿಸ್ತಾನದೊಂದಿಗೆ ಏಕೀಕರಿಸುವ ‘ಅಖಂಡ ಭಾರತ’ದ ಸಂಕಲ್ಪದೊಂದಿಗೆ ನಾವು ಭಾರತ್ ಮಾತೆಯ ‘ಆರತಿ’ ನಡೆಸಿದ್ದೇವೆ. ಜನವರಿ 30, 1948 ರಂದು ಅವರನ್ನು ಬಂಧಿಸಿದ ವಿರುದ್ಧದ ನಮ್ಮ ಕೋಪವನ್ನು ವ್ಯಕ್ತಪಡಿಸಲು ನಾವು ಜನವರಿ 30 ಅನ್ನು 'ಗೋಡ್ಸೆ-ಆಪ್ಟೆ ಸ್ಮೃತಿ ದಿವಸ್' ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಪಿಟಿಐಗೆ ತಿಳಿಸಿದ್ದಾರೆ.
ಹಿಂದೂ ಮಹಾಸಭಾವು ಕಾಳಿಚರಣ್ ಮಹಾರಾಜ್ ಮತ್ತು ಹಿಂದೂ ಮಹಾಸಭಾದ ನಾಲ್ವರು ನಾಯಕರಿಗೆ ಗ್ವಾಲಿಯರ್ನಲ್ಲಿ “ಗೋಡ್ಸೆ-ಆಪ್ಟೆ ಭಾರತ ರತ್ನ” ನೀಡಿ ʼಗೌರವಿಸಿದ್ದುʼ, ಕಾಳಿಚರಣ್ ಮಹಾರಾಜ್ ಜೈಲಿನಲ್ಲಿರುವ ಕಾರಣ, ಕಾಳಿಚರಣ್ ಪರವಾಗಿ ಪ್ರಮೋದ್ ಲೋಹಪಾತ್ರೆ ಗೌರವವನ್ನು ಸ್ವೀಕರಿಸಿದರು ಎಂದು ಭಾರದ್ವಾಜ್ ಹೇಳಿರುವುದಾಗಿ indianexpress ವರದಿಯಲ್ಲಿ ಉಲ್ಲೇಖಿಸಿದೆ.
ಗ್ವಾಲಿಯರ್ನ ದೌಲತ್ಗಂಜ್ ಪ್ರದೇಶದಲ್ಲಿರುವ ಹಿಂದೂ ಮಹಾಸಭಾದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭಾರದ್ವಾಜ್, ಸ್ವಾತಂತ್ರ್ಯ ಹೋರಾಟಕ್ಕೆ ಹಿಂದೂ ಮಹಾಸಭಾ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದ್ದಾರೆ.
"ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಚರಕಾದಿಂದ ಎಂದು ಜನರನ್ನು ತಪ್ಪುದಾರಿಗೆಳೆಯಬಾರದು". ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಏಳು ಲಕ್ಷ ಜನರು, ದಾರ್ಶನಿಕರು ಮಾಡಿದ ತ್ಯಾಗದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಜನರಿಗೆ ತಿಳಿಸಲಿಲ್ಲ. ಹಿಂದೂ ಮಹಾಸಭಾವು ಎಲ್ಲಾ ಕ್ರಾಂತಿಕಾರಿಗಳಿಗೆ ಗೌರವ ಸಲ್ಲಿಸುತ್ತದೆ’ ಎಂದು ಭಾರದ್ವಾಜ್ ಹೇಳಿದ್ದಾರೆ.
ಕಳೆದ ನವೆಂಬರ್ನಲ್ಲಿ ಹಿಂದೂ ಮಹಾಸಭಾವು ನಾಥೂರಾಂ ಗೋಡ್ಸೆಯನ್ನು 1949 ರಲ್ಲಿ ಗಲ್ಲಿಗೇರಿಸಿದ ಹರಿಯಾಣದ ಅಂಬಾಲಾ ಸೆಂಟ್ರಲ್ ಜೈಲಿನಿಂದ ತಂದ ಮಣ್ಣನ್ನು ಬಳಸಿ ಗೋಡ್ಸೆ ಪ್ರತಿಮೆಯನ್ನು ಕೆತ್ತಿಸುವುದಾಗಿ ಹೇಳಿತ್ತು.







