ಅಮೆರಿಕದಲ್ಲಿ ಹಿಮ ಚಂಡಮಾರುತದ ಅಬ್ಬರ: 10 ರಾಜ್ಯಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ

photo:PTI
ನ್ಯೂಯಾರ್ಕ್, ಜ.30 : ಅಮೆರಿಕದ ಈಶಾನ್ಯ ತೀರಕ್ಕೆ ಅಪ್ಪಳಿಸಿರುವ ಭಾರೀ ಹಿಮ ಚಂಡಮಾರುತದಿಂದ ಎಲ್ಲೆಡೆ ಹಿಮದ ರಾಶಿ ಆವರಿಸಿದ್ದು 10 ರಾಜ್ಯಗಳಿಗೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ನ್ಯೂ ಹ್ಯಾಂಪ್ಶೈರ್, ಮೆಸಷುವೆಟ್ಸ್, ರ್ಹೋಡ್ ಐಲ್ಯಾಂಡ್, ನ್ಯೂಯಾರ್ಕ್, ನ್ಯೂಜೆರ್ಸಿ ಸಹಿತ 10 ರಾಜ್ಯಗಳಲ್ಲಿ ಇನ್ನಷ್ಟು ಹಿಮಪಾತ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಸ್ತೆಗೆ ಇಳಿಯದಂತೆ ಜನರಿಗೆ ಸೂಚಿಸಲಾಗಿದೆ. ಫಿಲಿಡೆಲ್ಫಿಯಾ, ಬಾಸ್ಟನ್ ಮತ್ತು ನ್ಯೂಜೆರ್ಸಿಯಲ್ಲಿ ಹಿಮಪಾತದಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು ಹಲವೆಡೆ ಭೂಮಿಯ ಮೇಲೆ 18 ಇಂಚಿನಷ್ಟು ದಪ್ಪದ ಮಂಜು ಬಿದ್ದಿದೆ. ವಿದ್ಯುತ್ ವ್ಯವಸ್ಥೆಗೆ ತೊಡಕಾಗಿದ್ದು ಹಲವು ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿವೆ ಎಂದು ವರದಿಯಾಗಿದೆ.
ಫ್ಲೋರಿಡಾ ರಾಜ್ಯದಲ್ಲೂ ಅತ್ಯಂತ ಚಳಿಯ ಹವೆಯಿದೆ. ದೇಶದ ಪೂರ್ವ ಕರಾವಳಿಗೆ ಅಪ್ಪಳಿಸುತ್ತಿರುವ ಹಿಮ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ. ಜತೆಗೆ ಬಲವಾಗಿ ಗಾಳಿ ಬೀಸಲಿರುವುದರಿಂದ ಚಂಡಮಾರುತದ ಜತೆ ಸುಂಟರಗಾಳಿಯೂ ಸೇರಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಟ್ಲಾಂಟಿಕ್ ತೀರದ ಬಳಿಯಿರುವ ಪ್ರದೇಶಗಳಲ್ಲಿ ಅತ್ಯಂತ ಗರಿಷ್ಟ ಹಾನಿಯಾಗಿದೆ. ಗಂಟೆಗೆ 70 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಸಮುದ್ರದ ಅಲೆಗಳ ಮಟ್ಟವೂ ಹೆಚ್ಚಿದೆ. ನ್ಯೂಯಾರ್ಕ್, ಬಾಸ್ಟನ್ ಮತ್ತು ಫಿಲಿಡೆಲ್ಫಿಯಾ ನಗರಗಳಲ್ಲಿ ವಿಮಾನ ಸಂಚಾರಕ್ಕೆ ಅಡ್ಡಿಯಾಗಿದ್ದು 4,500ಕ್ಕೂ ಅಧಿಕ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಬಾಸ್ಟನ್- ವಾಷಿಂಗ್ಟನ್ ನಡುವಿನ ಹೈಸ್ಪೀಡ್ ರೈಲಿನ ಸಂಚಾರವನ್ನೂ ರದ್ದುಗೊಳಿಸಲಾಗಿದೆ.
ತುರ್ತು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ರಾಷ್ಟ್ರೀಯ ಹವಾಮಾನ ಇಲಾಖೆಯು ಜನರಿಗೆ ಸೂಚಿಸಿದ್ದು ಪ್ರಯಾಣವನ್ನು ನಿರ್ಬಂಧಿಸುವಂತೆ ತಿಳಿಸಿದೆ. ಹಿಮಚಂಡಮಾರುತದಿಂದ ಶೂನ್ಯಕ್ಕೂ ಕೆಳಗಿನ ಡಿಗ್ರಿಯಲ್ಲಿ ಚಳಿಗಾಳಿ ಬೀಸಲಿದೆ ಎಂದಿರುವ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ , ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.







