ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ: ರೈತರ ಸಮಸ್ಯೆಗಳು, ಪೆಗಾಸಸ್ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷಗಳು ಸಜ್ಜು

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(file photo:PTI)
ಹೊಸದಿಲ್ಲಿ,ಜ.30: ಸೋಮವಾರದಿಂದ ಆರಂಭಗೊಳ್ಳಲಿರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ವೇದಿಕೆ ಸಿದ್ಧಗೊಂಡಿದ್ದು,ಪೆಗಾಸಸ್ ಬೇಹುಗಾರಿಕೆ ವಿವಾದ,ರೈತರ ಸಂಕಷ್ಟಗಳು ಮತ್ತು ಪೂರ್ವ ಲಡಾಖ್ನಲ್ಲಿ ಚೀನಿ ಅತಿಕ್ರಮಣಗಳಂತಹ ವಿಷಯಗಳ ಕುರಿತು ಮೋದಿ ಸರಕಾರವನ್ನು ಗುರಿಯಾಗಿಸಿಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ.
ಕೋವಿಡ್ ಸ್ಥಿತಿಯ ಹಿನ್ನೆಲೆಯಲ್ಲಿ ಸೆಂಟ್ರಲ್ ಹಾಲ್ ಮತ್ತು ಉಭಯ ಸದನಗಳ ಚೇಂಬರ್ಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭಾಷಣದೊಂದಿಗೆ ಅಧಿವೇಶನವು ಆರಂಭಗೊಳ್ಳಲಿದೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಆರ್ಥಿಕ ಸಮೀಕ್ಷೆ 2021-22 ಮತ್ತು ಮಂಗಳವಾರ ಕೇಂದ್ರ ಮುಂಗಡಪತ್ರವನ್ನು ಮಂಡಿಸಲಿದ್ದಾರೆ.
ಸಾಂಕ್ರಾಮಿಕದ ಮೂರನೇ ಅಲೆಯ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳು ಪಾಳಿಗಳಲ್ಲಿ ಪ್ರತ್ಯೇಕ ಬೈಠಕ್ಗಳ ಪದ್ಧತಿಗೆ ಮರಳಲಿದ್ದು, ಸದಸ್ಯರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲಿದ್ದಾರೆ.
ಲೋಕಸಭೆಯು ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯವನ್ನು ಬುಧವಾರದಿಂದ ಚರ್ಚೆಗೆತ್ತಿಕೊಳ್ಳಲಿದ್ದು,ಫೆ.7ರಂದು ಪ್ರಧಾನಿ ನರೇಂದ್ರ ಮೋದಿಯವರು ಚರ್ಚೆಗೆ ಉತ್ತರಿಸುವ ನಿರೀಕ್ಷೆಯಿದೆ.
ಫೆ.2ರಿಂದ ನಾಲ್ಕು ದಿನಗಳನ್ನು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ತಾತ್ಕಾಲಿಕವಾಗಿ ಮೀಸಲಿಡಲಾಗಿದೆ ಎಂದು ಲೋಕಸಭಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ಭಾಗವು ಜ.31ರಿಂದ ಫೆ.11ರವರೆಗೆ ನಡೆಯಲಿದ್ದು,ನಂತರ ವಿವಿಧ ಇಲಾಖೆಗಳಿಗೆ ಬಜೆಟ್ ಹಂಚಿಕೆಗಳನ್ನು ಪರಿಶೀಲಿಸಲು ಸಮಯ ನೀಡಲಾಗುತ್ತದೆ. ಮಾ.14ರಿಂದ ಪುನರಾರಂಭಗೊಳ್ಳುವ ಅಧಿವೇಶನವು ಎ.8ರಂದು ಅಂತ್ಯಗೊಳ್ಳುತ್ತದೆ.
ಫೆ.10ರಿಂದ ಮಾ.7ರವರೆಗೆ ಮತದಾನ ನಡೆಯಲಿರುವ ಉತ್ತರ ಪ್ರದೇಶ,ಉತ್ತರಾಖಂಡ,ಪಂಜಾಬ್,ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳಿಗಾಗಿ ಕಾವೇರಿದ ಪ್ರಚಾರದ ನಡುವೆಯೇ ಬಜೆಟ್ ಅಧಿವೇಶನ ನಡೆಯಲಿದೆ.
ತಾನು ಸಮಾನಮನಸ್ಕ ಪಕ್ಷಗಳೊಂದಿಗೆ ಸೇರಿಕೊಂಡು ರೈತರ ಸಮಸ್ಯೆಗಳು,ಚೀನಿ ಅತಿಕ್ರಮಣಗಳು,ಕೋವಿಡ್ನಿಂದ ಮೃತರ ಕುಟುಂಬಗಳಿಗೆ ಪರಿಹಾರ ಪ್ಯಾಕೇಜ್ಗಾಗಿ ಒತ್ತಾಯ,ಏರ್ ಇಂಡಿಯಾದ ಮಾರಾಟ ಮತ್ತು ಪೆಗಾಸಸ್ ಬೇಹುಗಾರಿಕೆ ವಿವಾದದಂತಹ ವಿಷಯಗಳನ್ನು ಅಧಿವೇಶನದಲ್ಲಿ ಎತ್ತುವುದಾಗಿ ಮುಖ್ಯ ಪ್ರತಿಪಕ್ಷ ಕಾಂಗ್ರೆಸ್ ಘೋಷಿಸಿದೆ.
ಅಧಿವೇಶನದ ಅವಧಿಯಲ್ಲಿ ಸದನಗಳು ಸುಗಮವಾಗಿ ಕಾರ್ಯ ನಿರ್ವಹಿಸುವಂತಾಗಲು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮತ್ತು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯನಾಯ್ಡು ಅವರು ಸೋಮವಾರ ರಾಜಕೀಯ ಪಕ್ಷಗಳ ಸದನ ನಾಯಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ.







