ದರೋಡೆಗೆ ಸಂಚು, ದ್ವಿಚಕ್ರ ವಾಹನಗಳ ಕಳ್ಳತನ: ಮೂವರು ಆರೋಪಿಗಳ ಬಂಧನ

ಬೆಂಗಳೂರು, ಜ.31: ದರೋಡೆಗೆ ಸಂಚು ಮಾಡುತ್ತಿದ್ದ ಹಾಗೂ ವಾಹನ, ಮೊಬೈಲ್ ಫೋನ್ ಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ರವಿವಾರ ಮೂವರು ಆರೋಪಿಗಳನ್ನು ಬಂಧಿಸಿರುವ ಗೋವಿಂದರಾಜನಗರ ಪೊಲೀಸ್ ಠಾಣೆ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರವಿವಾರ ಗೋವಿಂದರಾಜನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಐವರು ದರೋಡೆಗೆ ಸಂಚು ಮಾಡುತ್ತಿದ್ದಾರೆಂಬ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ ದ್ವಿಚಕ್ರ ವಾಹನ, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ವಿಜಯನಗರ, ಅನ್ನಪೂರ್ಣೇಶ್ವರಿ ನಗರ, ತಲಘಟ್ಟಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನಗಳನ್ನು ಹಾಗೂ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಆದರ ಆಧಾರದಲ್ಲಿ ಆರೋಪಿಗಳ ಕಡೆಯಿಂದ ಸುಮಾರು 3,00,000 ರೂ. ಬೆಲೆಬಾಳುವ 6 ದ್ವಿಚಕ್ರ ವಾಹನಗಳು ಹಾಗೂ ವಿವಿಧ ಕಂಪೆನಿಯ 6 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





