ಮಾದಕ ದ್ರವ್ಯ ಮಾಫಿಯಾ ಮತ್ತು ಖಾಸಗಿ ಬಂದರುಗಳ ಪಾತ್ರ

ಅದಾನಿ ಪೋರ್ಟ್ಸ್ ಆ್ಯಂಡ್ ಲಾಜಿಸ್ಟಿಕ್ಸ್ ದೇಶದ ಅತ್ಯಂತ ದೊಡ್ಡ ವಾಣಿಜ್ಯ ಬಂದರುಗಳ ಪೈಕಿ ಒಂದಾಗಿದೆ. ಗುಜರಾತ್, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಒಡಿಶಾ ಸೇರಿದಂತೆ ಭಾರತದ ಏಳು ರಾಜ್ಯಗಳಲ್ಲಿರುವ 13 ಬಂದರುಗಳಲ್ಲಿ ಅದು ತನ್ನ ಉಪಸ್ಥಿತಿಯನ್ನು ಹೊಂದಿದೆ. ಇನ್ನು ಮುಂದೆ ತಾನು ಪಾಕಿಸ್ತಾನ, ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಬರುವ ಕಂಟೇನರ್‌ಗಳೊಂದಿಗೆ ವ್ಯವಹರಿಸುವುದಿಲ್ಲ ಎಂಬ ಹೇಳಿಕೆಯನ್ನೂ ಅದು ನೀಡಿದೆ. ಆ ಮೂಲಕ, ಈ ಹಿಂದೆಯೂ ಈ ದೇಶಗಳಿಂದ ಬೃಹತ್ ಪ್ರಮಾಣದ ಮಾದಕ ದ್ರವ್ಯ ಭಾರತವನ್ನು ಗುಪ್ತವಾಗಿ ಪ್ರವೇಶಿಸಿರಬಹುದು ಎಂಬ ಸಂಶಯಕ್ಕೆ ಇದು ಪುಷ್ಟಿ ನೀಡುತ್ತದೆ.
ಕಂದಾಯ ಮತ್ತು ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು 2021 ಸೆಪ್ಟಂಬರ್ 21ರಂದು ಗುಜರಾತ್‌ನ ಮುಂಡ್ರ ಬಂದರಿನಲ್ಲಿ ಮೂರು ಟನ್‌ಗಳಷ್ಟು ಮಾದಕ ದ್ರವ್ಯವನ್ನು ವಶಪಡಿಸಿಕೊಂಡರು. ಒಂದೇ ಘಟನೆಯಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡಿರುವುದು ಬಹುಶಃ ಪ್ರಪಂಚದಲ್ಲೇ ಮೊದಲ ಬಾರಿಯಾಗಿದೆ.
ಇದು ಇಡೀ ಭಾರತ ದೇಶದ ಭದ್ರತೆ, ಆರ್ಥಿಕತೆ ಮತ್ತು ಯವಜನಾಂಗಕ್ಕೆ ಎದುರಾಗಿರುವ ಗಂಭೀರ ಬೆದರಿಕೆಯ ಸೂಚನೆಯಾಗಿದೆ. ಈ ಕಾರ್ಯಾಚರಣೆಗೆ ಡಿಆರ್‌ಐಯನ್ನು ನಾವು ಅಭಿನಂದಿಸಲೇಬೇಕಾಗಿದೆ. ಆದರೆ ಈಗ ತನಿಖೆ ನಡೆಯಬೇಕಾಗಿರುವುದು ಎಷ್ಟು ಮಾದಕ ದ್ರವ್ಯ ಈಗಾಗಲೇ ಭಾರತದೊಳಕ್ಕೆ ನುಸುಳಿದೆ ಮತ್ತು ಎಷ್ಟು ಜನರ ಜೀವನವನ್ನು ಹಾಳು ಮಾಡಿದೆ ಹಾಗೂ ಇದರ ಹಿಂದೆ ಯಾರಿದ್ದಾರೆ ಮತ್ತು ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರ ಜೊತೆಗೆ ಅವರು ಹೊಂದಿರುವ ನಂಟು ಏನು ಎಂಬ ವಿಷಯಗಳ ಬಗ್ಗೆ. ಈ ಮಾದಕ ದ್ರವ್ಯಕ್ಕೂ ಆಂಧ್ರಪ್ರದೇಶದ ನಗರವೊಂದಕ್ಕೂ ಬಲಿಷ್ಠ ವಾಣಿಜ್ಯ ನಂಟು ಇರುವುದು ಪತ್ತೆಯಾಗಿದೆ. ತಮ್ಮ ರಾಜ್ಯಗಳಲ್ಲಿ ಪತ್ತೆಯಾಗಿರುವ ಮಾದಕ ದ್ರವ್ಯಗಳು ಆಂಧ್ರಪ್ರದೇಶದಿಂದಲೇ ಬಂದಿವೆ ಎಂಬುದಾಗಿ ಆರು ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳ ವೀಡಿಯೊ ಹೇಳಿಕೆಗಳು ತಿಳಿಸಿವೆ. ಅಫ್ಘಾನಿಸ್ತಾನ ಮತ್ತು ಭಾರತವನ್ನು ದುರ್ಬಲಗೊಳಿಸಲು ಪಿತೂರಿ ಹೂಡುತ್ತಿರುವ ಇತರ ನೆರೆಯ ದೇಶಗಳನ್ನೊಳಗೊಂಡಿರುವ ಅಂತರ್‌ರಾಷ್ಟ್ರೀಯ ಜಾಲದೊಂದಿಗೆ ಈ ಮಾದಕ ದ್ರವ್ಯವು ಸಂಬಂಧ ಹೊಂದಿದೆ ಎಂಬ ಅಂಶ ವನ್ನೂ ಈ ಪೊಲೀಸ್ ಅಧಿಕಾರಿಗಳು ಹೊರ ಗೆಡವಿದ್ದಾರೆ. ಅವುಗಳ ವಿವರಗಳು ಇಲ್ಲಿವೆ:
ಮುಂಡ್ರ ವಿಮಾನ ನಿಲ್ದಾಣದಲ್ಲಿ ಮಾದಕ ದ್ರವ್ಯ ವಶ
ಡಿಆರ್‌ಐ ಸೆಪ್ಟಂಬರ್ 14 ಮತ್ತು 15ರಂದು ಸರಕನ್ನು ತಡೆಗಟ್ಟಿತು. ಉನ್ನತ ಗುಣಮಟ್ಟದ ಹೆರಾಯಿನನ್ನು ಅಫ್ಘಾನಿಸ್ತಾನದಿಂದ ಗುಜರಾತ್‌ನ ಮುಂಡ್ರ ಬಂದರಿಗೆ ಇರಾನ್‌ನ ‘ಬಾಂದರ್ ಅಬ್ಬಾಸ್’ ಬಂದರಿನಿಂದ ಎರಡು ಕಂಟೇನರ್‌ಗಳಲ್ಲಿ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎಂಬ ನಿರ್ದಿಷ್ಟ ಗುಪ್ತಚರ ಮಾಹಿತಿಯು ಅವರಿಗೆ ಲಭಿಸಿತ್ತು. ಆ ಎರಡು ಕಂಟೇನರ್‌ಗಳಲ್ಲಿ 1,999.58 ಕೆಜಿ ಮತ್ತು 988.64 ಕೆಜಿ ಹೆರಾಯಿನನ್ನು ಹೇರಲಾಗಿತ್ತು. ಭದ್ರತಾ ಮತ್ತು ಸುಂಕ ಅಧಿಕಾರಿಗಳ ಕಣ್ಣಿಗೆ ಬೀಳದಂತೆ ತಡೆಯಲು ಹುಡಿಗಳ ಪದರಗಳ ನಡುವೆ ಹೆರಾಯಿನನ್ನು ಹೂತಿಡಲಾಗಿತ್ತು. ತನಿಖೆಯ ವೇಳೆ ಬಯಲಿಗೆ ಬಂದ ಇನ್ನೊಂದು ಭಯಾನಕ ಸಂಗತಿಯೆಂದರೆ, ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಸಮೀಪದ ವಿಜಯವಾಡದಲ್ಲಿ ನೋಂದಣಿಯಾಗಿರುವ ಆಶಿ ಟ್ರೇಡಿಂಗ್ ಕಂಪೆನಿ ಎಂಬ ಕಂಪೆನಿಯು ಈ ಘಟನೆಯೊಂದಿಗೆ ನಂಟು ಹೊಂದಿರುವುದು. ಇದು ಭಾರತದಲ್ಲಿ ಈವರೆಗೆ ಒಂದು ಘಟನೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಅತಿ ಹೆಚ್ಚಿನ ಪ್ರಮಾಣದ ಮಾದಕ ದ್ರವ್ಯವಾಗಿದೆ. ಅದೂ ಅಲ್ಲದೆ, ಜಾಗತಿಕ ಮಟ್ಟದಲ್ಲೂ ಒಂದು ಘಟನೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಅತ್ಯಧಿಕ ಪ್ರಮಾಣದ ಮಾದಕ ದ್ರವ್ಯ ಇದಾಗಿದೆ.
ಕಳ್ಳಸಾಗಾಣಿಕೆಯಲ್ಲಿ ಶಾಮೀಲಾಗಿರುವ ವ್ಯಕ್ತಿಗಳ ವಿವರ:
1) ಗೋವಿಂದರಾಜು ದುರ್ಗಾ ಪೂರ್ಣ ವೈಶಾಲಿ ಮತ್ತು ಮಚವರಮ್ ಸುಧಾಕರ್. ಇವರು ವಿಜಯವಾಡದಲ್ಲಿ ನೋಂದಾವಣೆಗೊಂಡಿರುವ ತಮ್ಮ ಕಂಪೆನಿ ಆಶಿ ಟ್ರೇಡಿಂಗ್ ಕಂಪೆನಿಯ ಮೂಲಕ ಕಂದಹಾರ್‌ನಲ್ಲಿರುವ ಕಂಪೆನಿಯೊಂದರಿಂದ ಹೆರಾಯಿನನ್ನು ಅರೆ ಸಂಸ್ಕರಿತ ಮೆಗ್ನೀಶಿಯಮ್ ಸಿಲಿಕೇಟ್ ಪುಡಿಯಲ್ಲಿ ಅಡಗಿಸಿ ಆಮದು ಮಾಡಿಕೊಂಡಿದ್ದಾರೆನ್ನಲಾಗಿದೆ. 2) ನಾಲ್ವರು ಅಫ್ಘಾನ್ ರಾಷ್ಟ್ರೀಯರು ಮತ್ತು 3)ಓರ್ವ ಉಝ್ಬೆಕ್ ಮಹಿಳೆ. ಈ ಎಲ್ಲರನ್ನೂ ಡಿಆರ್‌ಐ ಅಕ್ಟೋಬರ್ 12ರ ವೇಳೆಗೆ ಬಂಧಿಸಿದೆ. ಈ ಕಳ್ಳಸಾಗಾಣಿಕೆಯಲ್ಲಿ ವೈಶಾಲಿ ಮತ್ತು ಸುಧಾಕರ್ ಪಾತ್ರ ತುಂಬಾ ಸಣ್ಣದು. ಹೆರಾಯಿನ್ ಕಳ್ಳಸಾಗಾಣಿಕೆಯಲ್ಲಿ ತಮ್ಮ ಮೆಗ್ನೀಶಿಯಮ್ ಸಿಲಿಕೇಟ್ ಕಲ್ಲುಗಳ ಕಂಟೇನರ್‌ಗಳನ್ನು ಬಳಸಲು ಅವಕಾಶ ನೀಡಿರುವುದಕ್ಕಾಗಿ ಅವರಿಗೆ ಸಿಕ್ಕಿರುವುದು ಕೇವಲ 10 ಲಕ್ಷದಿಂದ 12 ಲಕ್ಷ ರೂಪಾಯಿ ಕಮಿಶನ್. ಅಫ್ಘಾನ್ ರಾಷ್ಟ್ರೀಯರನ್ನೊಳಗೊಂಡ ಬೃಹತ್ ಜಾಲವು ಈ ಕಳ್ಳ ಸಾಗಾಣಿಕೆಯ ಹಿಂದೆ ಇದೆ ಎಂಬುದಾಗಿ ಶಂಕಿಸಲಾಗಿದೆ’’ ಎಂಬುದಾಗಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿರುವ ಕೆಲವು ವ್ಯಕ್ತಿಗಳಿಂದ ವೈಶಾಲಿ ಮತ್ತು ಸುಧಾಕರ್ ಸೂಚನೆಗಳನ್ನು ಪಡೆಯುತ್ತಿದ್ದರು ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆಮದಿನ ನೆವದಲ್ಲಿ ಅವರು ಹಿಂದೆಯೂ ಮಾಡಿರಬಹುದಾದ ಕಳ್ಳಸಾಗಾಣಿಕೆಗಳ ಬಗ್ಗೆ ತನಿಖೆ ಮಾಡಲಾಗುತ್ತಿದೆ’’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಲ್ಮಂಡ್, ಬದ್ಘಿಸ್, ಉರುಝ್ಗಿನ್ ಮತ್ತು ಫರ್ಯಾಬ್ ಸೇರಿದಂತೆ ಅಫ್ಘಾನಿಸ್ತಾನದಲ್ಲಿ ಅಫೀಮು ಉತ್ಪಾದನೆಯಾಗುವ ಪ್ರಮುಖ ಪ್ರಾಂತಗಳ ಪೈಕಿ ಕಂದಹಾರ್ ಕೂಡ ಒಂದಾಗಿದೆ ಎಂಬುದಾಗಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಡಿಆರ್‌ಐ ಬಳಿಕ, ವಿಜಯವಾಡದ ಟ್ರೇಡಿಂಗ್ ಕಂಪೆನಿಯ ಜನರಲ್ ಮ್ಯಾನೇಜರ್ ಎಂ. ಸುಧಾಕರ್‌ರನ್ನು ಚೆನ್ನೈನಲ್ಲಿ ಬಂಧಿಸಿದೆ.
ವಿಶ್ವಸಂಸ್ಥೆಯ ಎಚ್ಚರಿಕೆ
ಭಾರತವನ್ನು ಗುರಿಯಾಗಿಸಿರುವ ಅಂತರ್‌ರಾಷ್ಟ್ರೀಯ ಮಾದಕ ದ್ರವ್ಯ ದಂಧೆಯಲ್ಲಿ ಅಫ್ಘಾನಿಸ್ತಾನ ಸೂತ್ರಧಾರನಾಗಿದೆ. ವಿಶ್ವಸಂಸ್ಥೆಯೂ ಇದನ್ನು ಗಣನೆಗೆ ತೆಗೆದುಕೊಂಡಿದೆ. ಅಫ್ಘಾನಿಸ್ತಾನದಲ್ಲಿ 800ರಿಂದ 900 ಮಧ್ಯಮ ಮತ್ತು ಉನ್ನತ ಮಟ್ಟದ ಮಾದಕದ್ರವ್ಯ ಸಾಗಾಟದಾರರು/ಗುಂಪುಗಳು ಇವೆ ಎಂಬುದಾಗಿ ವಿಶ್ವಸಂಸ್ಥೆ ಅಂದಾಜಿಸಿದೆ. ಅವರ ಪೈಕಿ ಹೆಚ್ಚಿನವರು, ಅಫೀಮು ಗಿಡವನ್ನು ಉನ್ನತ ಗುಣಮಟ್ಟದ ಹೆರಾಯಿನ್ ಆಗಿ ಪರಿವರ್ತಿಸುವ ಪೂರ್ಣ ಪ್ರಮಾಣದ ಪ್ರಯೋಗಾಲಯಗಳನ್ನೇ ಹೊಂದಿದ್ದಾರೆ. ಅದೂ ಅಲ್ಲದೆ, ಅಫ್ಘಾನಿಸ್ತಾನದಲ್ಲಿ 2020ರಲ್ಲಿ 6,300 ಟನ್ ಓಪಿಯಮ್ ಉತ್ಪಾದಿಸಲಾಗಿತ್ತು ಹಾಗೂ ಹೆಕ್ಟೇರ್‌ಗೆ ಸರಾಸರಿ 28 ಕಿಲೋಗ್ರಾಮ್ ಅಫೀಮು ಬೆಳೆ ಪಡೆಯಲಾಗಿತ್ತು ಎಂಬುದಾಗಿ ವಿಶ್ವಸಂಸ್ಥೆ ಅಂದಾಜಿಸಿದೆ. ಅಫ್ಘಾನಿಸ್ತಾನವು ಜಗತ್ತಿನಲ್ಲಿ ಉತ್ಪಾದನೆಯಾಗುವ ಅಫೀಮಿನ ಶೇ. 85ಕ್ಕಿಂತಲೂ ಅಧಿಕ ಅಫೀಮನ್ನು ಉತ್ಪಾದಿಸುತ್ತದೆ. ಅಫ್ಘಾನಿಸ್ತಾನದಲ್ಲಿ ಅಫೀಮು ಸಸ್ಯಗಳನ್ನು 2020ರಲ್ಲಿ ಒಟ್ಟು 2,24,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಲಾಗಿತ್ತು. 2019ಕ್ಕೆ ಹೋಲಿಸಿದರೆ ಅದು ಶೇ.37 ಅಥವಾ 61,000 ಹೆಕ್ಟೇರ್ ಅಧಿಕವಾಗಿತ್ತು.
ಮಾದಕ ದ್ರವ್ಯ-ಭಯೋತ್ಪಾನದೆ ನಂಟು ಮತ್ತು ಎನ್‌ಐಎ ದಾಳಿಗಳು
ಮುಂಡ್ರ ಬಂದರಿನಲ್ಲಿ ಅಫ್ಘಾನಿಸ್ತಾನದ 3,000 ಕೆಜಿ ಹೆರಾಯಿನನ್ನು ಡಿಆರ್‌ಐ ವಶಪಡಿಸಿಕೊಂಡ ಬಳಿಕ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಅದರ ತನಿಖೆಯ ಹೊಣೆಯನ್ನು ವಹಿಸಿಕೊಂಡಿತು. ಅದು ಈ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್ 12ರಂದು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್)ದ ಐದು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿತು. ಅಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ವಹಿಸಿಕೊಂಡ ಬಳಿಕ, ಈ ಮಾದಕ ದ್ರವ್ಯವು ಕಂದಹಾರ್‌ನಿಂದ ಭಾರತಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಅದಕ್ಕೂ ಭಯೋತ್ಪಾದನೆಗೂ ಏನಾದರೂ ನಂಟಿದೆಯೇ ಎಂಬ ನಿಟ್ಟಿನಲ್ಲಿ ಎನ್‌ಐಎ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ತಾಲಿಬಾನ್-ಪಾಕಿಸ್ತಾನ್ ಕೈವಾಡದ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಗೃಹ ಸಚಿವಾಲಯವು ಅದರ ತನಿಖೆಯನ್ನು ಎನ್‌ಐಎಗೆ ವಹಿಸಿದೆ. ವಶಪಡಿಸಿಕೊಂಡಿರುವ ಮಾದಕ ದ್ರವ್ಯದ ಬೆಲೆ ಸುಮಾರು 21,000 ಕೋಟಿ ರೂಪಾಯಿ ಎಂಬುದಾಗಿ ಅಂದಾಜಿಸಲಾಗಿದೆ.
ಅದಾನಿ ಗುಂಪಿನ ಹೇಳಿಕೆಗಳು
ಈ ಪ್ರಕರಣದಲ್ಲಿ ತನ್ನ ಬಂದರಿನ ಪಾತ್ರದ ಬಗ್ಗೆ ವಿವರಣೆ ನೀಡಲು ಅದಾನಿ ಪೋರ್ಟ್ಸ್ ಪ್ರಯತ್ನಿಸಿತು. ಕಾನೂನುಬಾಹಿರ ಸರಕನ್ನು ವಶಪಡಿಸಿಕೊಳ್ಳಲು ತನಗೆ ಅಧಿಕಾರವಿಲ್ಲ ಎಂದು ಅದು ಹೇಳಿಕೊಂಡಿತು. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದ್ದ ಟೀಕೆಗಳ ಹಿನ್ನೆಲೆಯಲ್ಲಿ ಅದಾನಿ ಪೋರ್ಟ್ಸ್ 2021 ಸೆಪ್ಟಂಬರ್ 21ರಂದು ಹೇಳಿಕೆಯೊಂದನ್ನು ನೀಡಿತು.
ಆ ಹೇಳಿಕೆಯು ಇಂತಿದೆ: ಕಾನೂನುಬಾಹಿರ ಸರಕನ್ನು ತೆರೆಯಲು, ಪರಿಶೀಲಿಸಲು ಮತ್ತು ವಶಪಡಿಸಿಕೊಳ್ಳಲು ಕಸ್ಟಮ್ಸ್ ಮತ್ತು ಡಿಆರ್‌ಐ ಮುಂತಾದ ಭಾರತ ಸರಕಾರದ ಪ್ರಾಧಿಕಾರಗಳಿಗೆ ಕಾನೂನು ಅಧಿಕಾರ ನೀಡಿದೆ. ದೇಶಾದ್ಯಂತ ಯಾವುದೇ ಬಂದರು ಪ್ರಾಧಿಕಾರವು ಕಂಟೇನರ್‌ಗಳನ್ನು ಪರೀಕ್ಷಿಸುವಂತಿಲ್ಲ. ಬಂದರು ಪ್ರಾಧಿಕಾರಗಳ ಪಾತ್ರವು ಬಂದರನ್ನು ನಡೆಸುವಷ್ಟಕ್ಕೆ ಮಾತ್ರ ಸೀಮಿತವಾಗಿದೆ’’.
ಅದಾನಿ ಗುಂಪಿನ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಲಾಗುತ್ತಿರುವ ಪ್ರೇರಿತ, ದುರುದ್ದೇಶದ ಹಾಗೂ ಸುಳ್ಳು ಪ್ರಚಾರ ಅಭಿಯಾನ ಈ ಹೇಳಿಕೆಯ ಬಳಿಕ ನಿಲ್ಲುತ್ತದೆ ಎಂಬುದಾಗಿ ನಾವು ಪ್ರಾಮಾಣಿಕವಾಗಿ ಭಾವಿಸುತ್ತೇವೆ. ಎಪಿಎಸ್‌ಇಝಡ್ ಹಡಗುಗಳಿಗೆ ಸೇವೆಗಳನ್ನು ಒದಗಿಸುತ್ತಿರುವ ಬಂದರು ಆಗಿದೆ. ಮುಂಡ್ರ ಅಥವಾ ನಮ್ಮ ಇತರ ಯಾವುದೇ ಬಂದರುಗಳ ಮೂಲಕ ಹಾದು ಹೋಗುತ್ತಿರುವ ಲಕ್ಷಾಂತರ ಟನ್ ಸರಕುಗಳು ಅಥವಾ ಕಂಟೇನರ್‌ಗಳನ್ನು ತನಿಕೆಗೆ ಒಳಪಡಿಸುವ ಪೊಲೀಸ್ ಅಧಿಕಾರ ನಮಗಿಲ್ಲ’’ ಎಂದು ಹೇಳಿಕೆ ತಿಳಿಸಿದೆ.
ಹಾಗಾಗಿ, ಬಂದರುಗಳ ಖಾಸಗೀಕರಣವು ದೇಶದ ಭದ್ರತೆಗೆ ಗಂಭೀರ ಬೆದರಿಕೆಯೊಡ್ಡಿದೆ ಎಂಬ ನಿರ್ಧಾರಕ್ಕೆ ನಾವು ಬರಬೇಕಾಗಿದೆ. ಭಯೋತ್ಪಾದಕರೊಂದಿಗೆ ನಂಟು ಹೊಂದಿರುವ ಸರಕುಗಳನ್ನು ಇಂಥ ಬಂದರುಗಳ ಮೂಲಕ ಸುಲಭವಾಗಿ ಭಾರತಕ್ಕೆ ಸಾಗಿಸಬಹುದಾಗಿದೆ.
ಅದಾನಿ ಪೋರ್ಟ್ಸ್ ಮತ್ತು ಲಾಜಿಸ್ಟಿಕ್ಸ್ ಅಕ್ಟೋಬರ್ 11ರಂದು ನೀಡಿದ ಎರಡನೇ ಹೇಳಿಕೆ ಇನ್ನಷ್ಟು ಕುತೂಹಲಕರವಾಗಿದೆ: ನವೆಂಬರ್ 15ರಿಂದ ಇರಾನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಂಟೇನರ್‌ಗಳಲ್ಲಿ ಬರುವ ಸರಕನ್ನು ಸ್ವೀಕರಿಸುವುದಿಲ್ಲ’’ ಎಂದು ಹೇಳಿಕೆ ತಿಳಿಸಿತು. ಈ ನಿಯಮವು ಎಪಿಎಸ್‌ಇಝಡ್ ನಿರ್ವಹಿಸುವ ಎಲ್ಲ ಟರ್ಮಿನಲ್‌ಗಳು ಹಾಗೂ ಎಪಿಎಸ್‌ಇಝಡ್ ಬಂದರಿನ ಯಾವುದೇ ತೃತೀಯ-ಪಕ್ಷದ ಟರ್ಮಿನಲ್‌ಗಳಿಗೆ ಅನ್ವಯಿಸುವುದು ಎಂಬುದಾಗಿಯೂ ಅದು ತಿಳಿಸಿತು.
ಅದಾನಿ ಪೋರ್ಟ್ಸ್ ಆ್ಯಂಡ್ ಲಾಜಿಸ್ಟಿಕ್ಸ್ ದೇಶದ ಅತ್ಯಂತ ದೊಡ್ಡ ವಾಣಿಜ್ಯ ಬಂದರುಗಳ ಪೈಕಿ ಒಂದಾಗಿದೆ. ಗುಜರಾತ್, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಒಡಿಶಾ ಸೇರಿದಂತೆ ಭಾರತದ ಏಳು ರಾಜ್ಯಗಳಲ್ಲಿರುವ 13 ಬಂದರುಗಳಲ್ಲಿ ಅದು ತನ್ನ ಉಪಸ್ಥಿತಿಯನ್ನು ಹೊಂದಿದೆ. ಇನ್ನು ಮುಂದೆ ತಾನು ಪಾಕಿಸ್ತಾನ, ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಬರುವ ಕಂಟೇನರ್‌ಗಳೊಂದಿಗೆ ವ್ಯವಹರಿಸುವುದಿಲ್ಲ ಎಂಬ ಹೇಳಿಕೆಯನ್ನೂ ಅದು ನೀಡಿದೆ. ಆ ಮೂಲಕ, ಈ ಹಿಂದೆಯೂ ಈ ದೇಶಗಳಿಂದ ಬೃಹತ್ ಪ್ರಮಾಣದ ಮಾದಕ ದ್ರವ್ಯ ಭಾರತವನ್ನು ಗುಪ್ತವಾಗಿ ಪ್ರವೇಶಿಸಿರಬಹುದು ಎಂಬ ಸಂಶಯಕ್ಕೆ ಇದು ಪುಷ್ಟಿ ನೀಡುತ್ತದೆ. ತನಗೆ ಪೊಲೀಸ್ ಅಧಿಕಾರವಿಲ್ಲ ಎಂಬುದಾಗಿ ಅದು ತನ್ನ ಮೊದಲ ಹೇಳಿಕೆಯಲ್ಲಿ ತಿಳಿಸಿದೆ. ಬಳಿಕ, ಈ ಮೂರು ದೇಶಗಳ ಕಂಟೇನರ್‌ಗಳನ್ನು ತಾನು ನಿಭಾಯಿಸುವುದಿಲ್ಲ ಎಂದು ಅದು ಹೇಳಿದೆ.
ಇಲ್ಲಿ ಉತ್ತರ ಸಿಗದ ಪ್ರಶ್ನೆಗಳು: ಯಾವುದೇ ಬಂದರು ತನ್ನ ಮೂಲಕ ಏನನ್ನೇ ಆದರೂ ಆಮದು ಮಾಡಿಕೊಳ್ಳಲು ಅವಕಾಶ ನೀಡಬಹುದೇ? ಈ ಬಂದರುಗಳ ಮೂಲಕ ನಿಷಿದ್ಧ ಮಾದಕದ್ರವ್ಯಗಳು ಪ್ರವೇಶಿಸುವುದನ್ನು ಕೇಂದ್ರ ಸರಕಾರ ಯಾಕೆ ತಡೆಯಲಿಲ್ಲ? ಕೆಲವು ದೇಶಗಳ ಕಂಟೇನರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದು ಸಾಧ್ಯ ಎನ್ನುವುದನ್ನೂ ಈ ಹೇಳಿಕೆ ತೋರಿಸುತ್ತದೆ. ಇದರ ಬಗ್ಗೆ ತನಿಖೆಯಾಗಬೇಕಾಗಿದೆ.
thehansindia.com







