ಪೆಗಾಸಸ್: ಎನ್‌ವೈಟಿ ವರದಿಯಲ್ಲಿನ ಅಂಶಗಳನ್ನೂ ತನಿಖೆಯಲ್ಲಿ ಒಳಪಡಿಸಬೇಕು; ಸುಪ್ರೀಂ ಸಮಿತಿಗೆ ಎಡಿಟರ್ಸ್ ಗಿಲ್ಡ್ ಮನವಿ

ಹೊಸದಿಲ್ಲಿ: ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಪೆಗಾಸಸ್ ಸ್ಪೈವೇರ್ ಕುರಿತು ಪ್ರಕಟಿಸಿದ ವರದಿಯಲ್ಲಿನ ಅಂಶಗಳನ್ನು ಕೂಡ ತನಿಖೆಗೊಳಪಡಿಸಬೇಕು ಎಂದು ಪೆಗಾಸಸ್ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿತ ತನಿಖಾ ಸಮಿತಿಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪತ್ರ ಬರೆದು ಮನವಿ ಮಾಡಿದೆ.
ಭಾರತ ಮತ್ತು ಇಸ್ರೇಲ್ ಸರಕಾರದ ನಡುವಿನ ಸುಮಾರು 2 ಬಿಲಿಯನ್ ಡಾಲರ್ ಒಪ್ಪಂದದನ್ವಯ ಶಸ್ತಾಸ್ತ್ರ ಸಹಿತ ಪೆಗಾಸಸ್ ಸ್ಪೈವೇರ್ ಕೂಡ ಖರೀದಿಸಿರುವ ವಿಚಾರದ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿ ವಿವರಿಸಿರುವ ಕುರಿತು ಎಡಿಟರ್ಸ್ ಗಿಲ್ಡ್ ಗಂಭೀರ ಕಳವಳ ವ್ಯಕ್ತಪಡಿಸಿದೆ.
"ಪ್ರಕರಣದ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೇಮಿತ ಜಸ್ಟಿಸ್ ರವೀಂದ್ರನ್ ನೇತೃತ್ವದ ಸಮಿತಿ ತನ್ನ ತನಿಖೆಯ ಭಾಗವಾಗಿ ನ್ಯೂಯಾರ್ಕ್ ಟೈಮ್ಸ್ ವರದಿಯನ್ನೂ ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರ, ಸಿಎಜಿ ಹಾಗೂ ಸಂಬಂಧಿತ ಸಚಿವಾಲಯಗಳಿಂದ ಅಫಿಡವಿಟ್ ಮೂಲಕ ಪ್ರತಿಕ್ರಿಯೆ ಕೇಳಬೇಕು,'' ಎಂದು ಎಡಿಟರ್ಸ್ ಗಿಲ್ಡ್ ತನ್ನ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
"ನೂಯಾರ್ಕ್ ಟೈಮ್ಸ್ ವರದಿಯಲ್ಲಿನ ಅಂಶಗಳಿಗೂ ಭಾರತ ಸರಕಾರ ನೀಡಿದ ಮಾಹಿತಿಗೂ ಬಹಳಷ್ಟು ವ್ಯತ್ಯಾಸವಿದೆ ಹಾಗೂ ಸರಕಾರ ಅಸ್ಪಷ್ಟ ಮಾಹಿತಿಯನ್ನು ಇಂತಹ ಗಂಭೀರ ವಿಚಾರದಲ್ಲಿ ನೀಡಿದೆ, ಸಮಿತಿಯ ತನಿಖಾ ವಿವರಗಳು ಸಾರ್ವಜನಿಕರಿಗೆ ಲಭ್ಯಗೊಳಿಸಬೇಕು,'' ಎಂದು ಸಮಿತಿ ಹೇಳಿದೆ.
ಭಾರತದ ವಕೀಲರು, ರಾಜಕಾರಣಿಗಳು, ಹೋರಾಟಗಾರರು, ಪತ್ರಕರ್ತರು ಸೇರಿದಂತೆ ಸುಮಾರು 161 ಮಂದಿಯ ಮೇಲೆ ಈ ಸ್ಪೈವೇರ್ ಮೂಲಕ ಗೂಢಚರ್ಯೆ ನಡೆಸಲಾಗಿತ್ತು ಎಂದು ದಿ ವೈರ್ ಸಹಿತ ಹಲವು ಸುದ್ದಿ ಮಾಧ್ಯಮಗಳು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಬಹಿರಂಗಪಡಿಸಿದ್ದವು.







