'ಮನ್ ಕಿ ಬಾತ್'ನಲ್ಲಿ ಪ್ರಧಾನಿಯಿಂದ ಅಮೈ ಮಹಾಲಿಂಗ ನಾಯ್ಕರ ಗುಣಗಾನ

ಮಂಗಳೂರು, ಜ.31: ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಬಂಟ್ವಾಳ ತಾಲೂಕಿನ ಅಮೈ ನಿವಾಸಿ ಮಹಾಲಿಂಗ ನಾಯ್ಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ರವಿವಾರದ ಬಾನುಲಿ ಭಾಷಣ 'ಮನ್ ಕಿ ಬಾತ್'ನಲ್ಲಿ ಗುಣಗಾನ ಮಾಡಿದ್ದಾರೆ.
"ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ಜನರಿಗೆ ಅಷ್ಟೇನೂ ತಿಳಿಯದ ಎಲೆಮರೆ ಕಾಯಿಯಂತಿರುವವರು ಬಹಳಷ್ಟು ಸಾಧಕರಿದ್ದಾರೆ. ಅಂತಹವರಲ್ಲಿ ಕರ್ನಾಟಕದ ಮಹಾಲಿಂಗ ನಾಯ್ಕ ಕೂಡಾ ಒಬ್ಬರು. ಇವರು ಎಲ್ಲರೂ ಬೆರಗಾಗುವಂತಹ ಸಾಧನೆ ಮಾಡಿದ್ದು, ಎಲ್ಲ ರೈತರಿಗೆ ಮಾದರಿಯಾಗಿದ್ದಾರೆ" ಎಂದು ಶ್ಲಾಘಿಸಿದ್ದಾರೆ.
"ಮಹಾಲಿಂಗ ಕೃಷಿಯಲ್ಲಿ ಅದೆಂತಹ ಆವಿಷ್ಕಾರಗಳನ್ನು ಮಾಡಿದ್ದಾರೆಂದರೆ ಅದನ್ನು ನೋಡಿ ಜನರು ದಂಗಾಗುತ್ತಾರೆ. ಇವರನ್ನು ‘ಸುರಂಗ ಮಾನವ’ ಎಂದೇ ಕರೆಯುತ್ತಾರೆ. ಎಲ್ಲರೂ ಇಂಥವರ ಬಗ್ಗೆ ಅರಿಯಯುವ ಪ್ರಯತ್ನ ಮಾಡಿ. ಇವರಿಂದ ಜೀವನದಲ್ಲಿ ಕಲಿಯಲು ಬಹಳಷ್ಟಿದೆ" ಎಂದು ಪ್ರಧಾನಿ ಕಿವಿಮಾತು ಹೇಳಿದರು.
Next Story