ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಹಮ್ಮದ್ ಹಾರಿಸ್ ನಲಪಾಡ್ ಅಧಿಕಾರ ಸ್ವೀಕಾರ
ಫೆ.10ರಂದು ಅಧಿಕೃತ ಪದಗ್ರಹಣ ಕಾರ್ಯಕ್ರಮ

Photo credit: Facebook
ಬೆಂಗಳೂರು, ಜ.31: ಮುಹಮ್ಮದ್ ಹಾರಿಸ್ ನಲಪಾಡ್ ಅವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಕ್ಷಾ ರಾಮಯ್ಯರ ಅವಧಿ ಪೂರ್ವನಿಗದಿಯಂತೆ ಇಂದು(ಜ.31ಕ್ಕೆ) ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಹಮ್ಮದ್ ನಲಪಾಡ್ ಇಂದು ಔಪಚಾರಿಕವಾಗಿ ರಾಜ್ಯ ಯುವ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದರೆ ಪದಗ್ರಹಣದ ಅಧಿಕೃತ ಕಾರ್ಯಕ್ರಮ ಫೆಬ್ರವರಿ 10ರಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ. ಎಲ್ಲಾ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಜತೆ ಮುಹಮ್ಮದ್ ಹಾರಿಸ್ ನಲಪಾಡ್ ಪ್ರತಿಜ್ಞೆ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ ಮುಹಮ್ಮದ್ ಹಾರಿಸ್ ನಲಪಾಡ್ ಯುವ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದು, ಈ ವೇಳೆ ಅವರ ತಂದೆ ಶಾಸಕ ಎನ್.ಎ.ಹಾರಿಸ್, ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು. ಮೌಲಾನ ಮಕ್ಸೂದ್ ಇಮ್ರಾನ್ ದುಆ ನೆರವೇರಿಸಿದರು.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮುಹಮ್ಮದ್ ಹಾರಿಸ್ ನಲಪಾಡ್ ಅತಿ ಹೆಚ್ಚು ಅಂದರೆ 64,203 ಮತಗಳನ್ನು ಗಳಿಸಿದ್ದರೂ ಚುನಾವಣಾ ಮಂಡಳಿ ಅವರನ್ನು ಅನರ್ಹಗೊಳಿಸಿದ್ದು, ಅವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿತ್ತು. ಈ ಹಿನ್ನೆಲೆಯಲ್ಲಿ 56,271 ಮತಗಳನ್ನು ಗಳಿಸಿದ್ದ ರಕ್ಷಾ ರಾಮಯ್ಯ ವಿಜೇತರು ಎಂದು ಘೋಷಿಸಲಾಗಿತ್ತು. ಇದು ಒಂದಿಷ್ಟು ವಿವಾದ, ಗೊಂದಲಕ್ಕೆ ಕಾರಣವಾಗಿತ್ತು.
ಬಳಿಕ ದಿನದಲ್ಲಿ ರಕ್ಷಾ ರಾಮಯ್ಯರಿಗೆ 2022ರ ಜನವರಿ 31ರ ಅವಧಿ ನಿಗದಿಪಡಿಸಲಾಗಿತ್ತು. ಆ ಅವಧಿ ಇಂದು ಮುಗಿದಿರುವ ಹಿನ್ನೆಲೆಯಲ್ಲಿ ಮುಹಮ್ಮದ್ ಹಾರಿಸ್ ನಲಪಾಡ್ ಇಂದು ಔಪಚಾರಿಕವಾಗಿ ಅಧಿಕಾರ ಸ್ವೀಕರಿಸಿದ್ದಾರೆ.







