ತಮ್ಮ ವಿವಾಹ ವಾರ್ಷಿಕೋತ್ಸವದಂದು ಜೈಲಿನಲ್ಲಿರುವ ಪತಿಗೆ ಭಾವನಾತ್ಮಕ ಪತ್ರ ಬರೆದ ಶ್ವೇತಾ ಸಂಜೀವ್ ಭಟ್
"ನಾನು ನಿಮ್ಮ ಪತ್ನಿಯಾಗಿರಲು ಹೆಮ್ಮೆಪಡುತ್ತೇನೆ"

Photo: facebook/Sanjiv Bhatt
ಹೊಸದಿಲ್ಲಿ: ʼಕಸ್ಟಡಿ ಮರಣʼ ಪ್ರಕರಣಕ್ಕೆ ಸಂಬಂದಿಸಿದಂತೆ ಗುಜರಾತ್ ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಇದೀಗ ಜೈಲಿನಲ್ಲಿರುವ ಸಂಜೀವ್ ಭಟ್ ರಿಗೆ ಅವರದ್ದೇ ಫೇಸ್ ಬುಕ್ ಖಾತೆಯ ಮೂಲಕ ಅವರ ಪತ್ನಿ ಶ್ವೇತಾ ಸಂಜೀವ್ ಭಟ್ ಭಾವನಾತ್ಮಕ ಪತ್ರ ಬರೆದಿದ್ದಾರೆ.
"ಇದು ಶ್ವೇತಾ ಸಂಜೀವ್ ಭಟ್, ೩೫ ವರ್ಷಗಳ ಮುಂಚೆ ಈ ದಿನದಂದು ನಾವು ನಮ್ಮ ಮಹತ್ವಪೂರ್ಣ ಯಾತ್ರೆಯನ್ನು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುವ, ಪರಸ್ಪರ ರಕ್ಷಿಸುವ ಭರವಸೆಯೊಂದಿಗೆ ಪ್ರಾರಂಭಿಸಿದ್ದೆವು. ಜೀವನದ ಪ್ರಕ್ಷುಬ್ಧ ಘಟ್ಟಗಳಲ್ಲಿ ಹಾದುಹೋಗುವ ವೇಳೆಗಳಲ್ಲಿ ನಾವು ಒಬ್ಬರಿಗೊಬ್ಬರು ಮೂಲಾಧಾರ ಮತ್ತು ಶಕ್ತಿಯಾಗಿದ್ದೆವು. ಇಂದು ನಾವು ವೈಭವದ 35 ವರ್ಷಗಳನ್ನು ಪೂರೈಸುತ್ತಿದ್ದೇವೆ. ಈ ವೇಳೆ ನನಗೇನೂ ಸಹಾಯ ಮಾಡಲು ಸಾಧ್ಯವಾಗದಿದ್ದರೂ ನಾವು ಜೊತೆಯಾಗಿ ಪ್ರಯಾಣಿಸಿದ, ನಾವು ಎದುರಿಸಿದ ಚಂಡಮಾರುತಗಳು ಮತ್ತು ಕಷ್ಟಕೋಟಲೆಗಳನ್ನು ಮೆಲುಕು ಹಾಕುತ್ತಿದ್ದೇನೆ.
ನಾವಿಬ್ಬರೂ ಜೊತೆಗಿರದ ಮೂರನೇ ವಿವಾಹ ವಾರ್ಷಿಕೋತ್ಸವವಾಗಿದೆ ಇದು. ಕ್ರೂರ ಶಕ್ತಿಗಳು ನಮ್ಮನ್ನು ಬೇರ್ಪಡಿಸಿ ಸುಳ್ಳು ಸೆರೆವಾಸ ವಿಧಿಸಿ ಇಂದಿಗೆ 1245 ದಿನಗಳೇ ಕಳೆದಿವೆ. ಕೆಲವು ಪುರುಷರು, ಧೈರ್ಯ, ಅಚಲವಾದ ಸಂಕಲ್ಪ ಮತ್ತು ಎಲ್ಲಾ ವಿಲಕ್ಷಣಗಳ ವಿರುದ್ಧ ಮತ್ತು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಲು ಅವಿನಾಶವಾದ ಸಾಮರ್ಥ್ಯವನ್ನು ಹೊಂದಿದ್ದರು ಎಂಬುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಸಂಜೀವ್, ನಾನು ನಿಮ್ಮ ಪತ್ನಿಯಾಗಿರಲು ಎಷ್ಟು ಹೆಮ್ಮೆಪಡುತ್ತಿದ್ದೇನೆಂಬುವುದಕ್ಕೆ ಪದಗಳೂ ನ್ಯಾಯ ನೀಡುವುದಿಲ್ಲ. ನಿಮ್ಮ ಹಮ್ರಾ, ಹಮ್ಸಫರ್ ಮತ್ತು ಹಮ್ಕದಮ್...
"ದುಷ್ಟತನದ ಮೇಲೆ ಸತ್ಯವು ಜಯಗಳಿಸುವ ದಿನಕ್ಕಾಗಿ ಹಾಗೂ ನಾವಿಬ್ಬರೂ ಮತ್ತೆ ಜೊತೆಯಾಗಿ ಕಾಲಕಳೆಯುವ ದಿನಕ್ಕಾಗಿ ನಾನು ಪ್ರಾರ್ಥಿಸುತ್ತಿದ್ದೇನೆ ಮತ್ತು ಹೋರಾಡುತ್ತಿದ್ದೇನೆ. ಇನ್ನೂ ಅನೇಕ ವಿವಾಹ ವಾರ್ಷಿಕೋತ್ಸವಗಳು ಬರಲಿವೆ, ಇದನ್ನು ನಾವು ನಮ್ಮ ಮನೆಯಲ್ಲಿ ನಮ್ಮ ಮಕ್ಕಳು ಮತ್ತು ಪ್ರೀತಿಪಾತ್ರರೊಂದಿಗೆ ಒಟ್ಟಿಗೆ ಆಚರಿಸುತ್ತೇವೆ! ನಿಮ್ಮನ್ನು ಪ್ರೀತಿಸುತ್ತೇನೆ." ಎಂದು ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಸಂಜೀವ್ ಭಟ್ ರ ಹಲವಾರು ಅಭಿಮಾನಿಗಳು ಮತ್ತು ಹಿತೈಷಿಗಳು ಅವರಿಗೆ ಶುಭ ಕೋರಿದ್ದಾರೆ.







