ಬೆಂಗಳೂರು ವಿವಿ ಎದುರು ಧರಣಿ ನಡೆಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್

ಬೆಂಗಳೂರು, ಜ.31: ಶೈಕ್ಷಣಿಕ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾನಿಲಯ ಎದುರು ವಿವಿಯ ಆಡಳಿತ ಕಚೇರಿ ಎದುರು ಧರಣಿ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಬೆಂಗಳೂರು ವಿಶ್ವವಿದ್ಯಾನಿಲಯಲದಲ್ಲಿ ಪರೀಕ್ಷಾ ಮೌಲ್ಯಮಾಪನದಲ್ಲಿ ಬೇಜವಾಬ್ದಾರಿ, ಸ್ನಾತಕೋತ್ತರ ಪದವಿ ಫಲಿತಾಂಶದಲ್ಲಿ ಗೊಂದಲ ಸೇರಿದಂತೆ ವಿವಿಧ ಶೈಕ್ಷಣಿಕ ಸಮಸ್ಯೆಗಳಿವೆ ಎಂದು ಆರೋಪಿಸಿ, ಅವುಗಳನ್ನು ಪರಿಹರಿಸಲು ಆಗ್ರಹಿಸಿ ಇಂದು ಬೆಳಗ್ಗೆ ಎಬಿವಿಪಿ ಕಾರ್ಯಕರ್ತರು ಬೆಂಗಳೂರು ಜ್ಞಾನಭಾರತಿಯಲ್ಲಿರುವ ವಿವಿ
ವಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಇದೇವೇಳೆ ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳು ರಾಯಚೂರಿನಲ್ಲಿ ನ್ಯಾಯಾಧೀಶರಿಂದ ಡಾ.ಬಿ.ಆರ್.ಅಂಬೇಡ್ಕರ್ ರಿಗೆ ಅವಮಾನ ಆಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭ ಎಬಿವಿಪಿ ಕಾರ್ಯಕರ್ತರು ಮತ್ತು ಸಂಶೋಧನಾ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕ ನಡೆದಿದೆ.
"ಅಂಕಪಟ್ಟಿ, ಫಲಿತಾಂಶ ವಿಳಂಬ ಸಮಸ್ಯೆ ಮಾಮೂಲಿ. ಇದಕ್ಕಿಂತ ಅಂಬೇಡ್ಕರ್ ಅವರಿಗೆ ಅವಮಾನ ಆಗಿರುವ ವಿಚಾರ ಗಂಭೀರವಾದುದು. ಆದ್ದರಿಂದ ಇಂದು ನಾವು ಪ್ರತಿಭಟನೆ ಮಾಡಲಿದ್ದೇವೆ. ನೀವು ನಾಳೆ ಬನ್ನಿ" ಎಂದು ಸಂಶೋಧನಾ ವಿದ್ಯಾರ್ಥಿಗಳು ಹೇಳಿದರೆನ್ನಲಾಗಿದೆ. ಆದರೆ ಇದಕ್ಕೆ ಒಪ್ಪದ ಎಬಿವಿಪಿ ಕಾರ್ಯಕರ್ತರು ಧರಣಿ ಮುಂದುವರಿಸಲು ಮುಂದಾದಾಗ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಈ ವೇಳೆ ಸ್ಥಳಕ್ಕಾಗಮಿಸಿದ ಜ್ಞಾನ ಭಾರತಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್ ಮಾಡಿದ್ದಾರೆ. ಇದರಿಂದ ಓರ್ವ ವಿದ್ಯಾರ್ಥಿನಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.







