ಉ.ಪ್ರ.ದಲ್ಲಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರತಿಪಕ್ಷಗಳು ಜನರನ್ನು ಪ್ರೇರೇಪಿಸುತ್ತಿವೆ: ಪ್ರಧಾನಿ ಮೋದಿ

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರತಿಪಕ್ಷಗಳು ಮತದಾರರನ್ನು ಪ್ರೇರೇಪಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಬಡವರಿಗೆ ಮನೆಗಳು, ಹಿಂದುಳಿದ ವರ್ಗಗಳಿಗಾಗಿ ನೀತಿಗಳು, ವೈದ್ಯಕೀಯ ಕಾಲೇಜುಗಳು, ಎಕ್ಸ್‌ಪ್ರೆಸ್‌ವೇಗಳ ಮೂಲಕ ಹೆಚ್ಚಿನ ಸಂಪರ್ಕ, ಮುಸ್ಲಿಂ ಮಹಿಳೆಯರಿಗೆ ಉಪಕ್ರಮಗಳು ಹಾಗೂ ಮಹಿಳೆಯರಿಗೆ ಮದುವೆಯ ವಯಸ್ಸನ್ನು ಹೆಚ್ಚಿಸಿರುವುದನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
"ನಾವು ಉತ್ತರ ಪ್ರದೇಶದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ ಮತ್ತು ಪ್ರತಿಪಕ್ಷಗಳು ಸೇಡು ತೀರಿಸಿಕೊಳ್ಳಲು ಬಯಸುತ್ತವೆ. ಗಲಭೆ ಮನಸ್ಥಿತಿ ಹೊಂದಿರುವ ಜನರಿಗೆ ಟಿಕೆಟ್ ನೀಡಿದ್ದಾರೆ. ಅವರ ನಡವಳಿಕೆಯೇ ಎಲ್ಲದ್ದಕ್ಕೂ ಸಾಕ್ಷಿ ... ಜನರು ರಾಜ್ಯದಲ್ಲಿ ಸೌಹಾರ್ದ ಸರಕಾರವನ್ನು ಬಯಸುತ್ತಾರೆ, ”ಎಂದು ಅವರು ಜನ್ ಚೌಪಾಲ್ ಕಾರ್ಯಕ್ರಮದ ಮೂಲಕ ಶಾಮ್ಲಿ, ಮುಝಾಫರ್‌ನಗರ, ಬಾಗ್‌ಪತ್, ಸಹರಾನ್‌ಪುರ ಹಾಗೂ ಗೌತಮ್ ಬುಧ್ ನಗರದ ಮತದಾರರನ್ನು ಉದ್ದೇಶಿಸಿ ತನ್ನ ಮೊದಲ ವರ್ಚುವಲ್ ರ್ಯಾಲಿ ಯಲ್ಲಿ ಮೋದಿ ಹೇಳಿದ್ದಾರೆ.
ನಿರ್ಣಾಯಕ ಪಶ್ಚಿಮ ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಂದು ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ.





