ಶಿಕ್ಷಕರಿಗೆ ತುಳು ಶೈಕ್ಷಣಿಕ ಕಾರ್ಯಾಗಾರ

ಮಂಗಳೂರು, ಜ.31 : ತುಳು ಭಾಷಾಭಿಮಾನ ಹೆಚ್ಚಬೇಕಾದರೇ ಮಕ್ಕಳಲ್ಲಿ ಅದರ ಆಸಕ್ತಿ ಮೂಡಿಸಬೇಕಿದೆ. ತುಳು ಶಿಕ್ಷಕರ ಮೂಲಕ ತುಳು ಭಾಷೆಯ ಅಭಿರುಚಿಯನ್ನು ವಿಸ್ತರಿಸುವ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ, ತುಳು ಭಾಷೆ, ಸಂಸ್ಕೃತಿ, ರಂಗಕಲೆ ಸಹಿತ ಪರಂಪರೆಯನ್ನು ಪ್ರೋತ್ಸಾಹಿಸುವುದು ಅಕಾಡಮಿಯ ಜವಬ್ದಾರಿಯಾಗಿದೆ ಎಂದು ಪತ್ರಕರ್ತ ಎಸ್.ಆರ್. ಬಂಡಿಮಾರ್ ಹೇಳಿದರು.
ನಗರದ ಉರ್ವಸ್ಟೋರ್‌ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಿರಿ ಚಾವಡಿಯಲ್ಲಿ ಸೋಮವಾರ ನಡೆದ 'ತುಳು ಕಲ್ಪಾದಿಲೆನ ಓದು - ಬರವುದ ಕಜ್ಜಕೊಟ್ಯ' (ತುಳುವನ್ನು ತೃತೀಯ ಭಾಷೆಯನ್ನಾಗಿ ಬೋಧಿಸಲಾ ಗುತ್ತಿರುವ ದ.ಕ. ಮತ್ತು ಉಡುಪಿ ಜಿಲ್ಲೆಯ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಮೇಯರ್ ಪ್ರೇಮಾನಂದ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್ ಕೆ. ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಪ್ಪುಂದದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಯಾದವ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮತ್ತು ಮಂಗಳೂರು ವಿವಿಯ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಶಿಕ್ಷಣ ಸಂಯೋಜಕ ಡಾ. ಮಾಧವ ಎಂ.ಕೆ. ಭಾಗವಹಿಸಿದ್ದರು.
ಅಕಾಡಮಿಯ ಸದಸ್ಯರಾದ ನಾಗೇಶ್ ಕುಲಾಲ್, ಕಲಾವತಿ ದಯಾನಂದ, ನರೇಂದ್ರ ಕೆರೆಕಾಡು, ಚೇತಕ್ ಪೂಜಾರಿ, ಸಂತೋಷ್ ಪೂಜಾರಿ ಕಾರ್ಕಳ, ರಿಜಿಸ್ಟ್ರಾರ್ ಕವಿತಾ, ರಾಮಕುಂಜ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ. ಸೇಸಪ್ಪರೈ ಉಪಸ್ಥಿತರಿದ್ದರು.
ಅಕಾಡಮಿಯ ಸದಸ್ಯರಾದ ಸಿದ್ಧಕಟ್ಟೆ ಮಲ್ಲಿಕಾ ಶೆಟ್ಟಿ ವಂದಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಕಡಬ ದಿನೇಶ್ ರೈ ಕಾರ್ಯಕ್ರನ ನಿರೂಪಿಸಿದರು.







