ಉತ್ತರಪ್ರದೇಶ: 8 ವರ್ಷಗಳಿಂದ ಗೌರವಧನ ಪಾವತಿಸದ ಸರ್ಕಾರ; ಆರ್ಥಿಕ ಸಂಕಷ್ಟದತ್ತ ಮದರಸಾ ಶಿಕ್ಷಕರು

ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಅನುದಾನಿತ ಮದರಸಾಗಳ ಸುಮಾರು 20,000 ಶಿಕ್ಷಕರು ತಮ್ಮ ಮಾಸಿಕ ಗೌರವ ಧನಗಳಿಂದ ವಂಚಿತರಾಗಿದ್ದಾರೆ. ಇವರಲ್ಲಿ ಬಹುತೇಕರಿಗೆ 2013 ರಿಂದ ತಮ್ಮ ಮಾಸಿಕ ಗೌರವಧನವನ್ನು ಸ್ಥಗಿತಗೊಳಿಸಲಾಗಿದೆ. ಅಂದರೆ, ಕಳೆದ ಎಂಟು ವರ್ಷಗಳಿಂದ ಸರ್ಕಾರ ವೇತನವಿಲ್ಲದೆ ಇವರನ್ನು ದುಡಿಸಿಕೊಂಡಿದೆ.
“ಉತ್ತರ ಪ್ರದೇಶದ ಗೋರಖ್ಪುರದ ಮದರಸಾವೊಂದರಲ್ಲಿ ನನ್ನ ಪತಿಯು ಶಿಕ್ಷಕರಾಗಿದ್ದರು. ಆದರೆ, ಸರ್ಕಾರ ತನ್ನ ಪತಿಗೆ ಪಾವತಿಸಬೇಕಾದ ಗೌರವ ಧನವನ್ನು ಕಳೆದ ನಾಲ್ಕು ವರ್ಷಗಳಿಂದ ಪಾವತಿಸಿಲ್ಲ. ಸುಮಾರು 4 ಲಕ್ಷ ರುಪಾಯಿಗಳಷ್ಟು ಸರ್ಕಾರ ತನ್ನ ಪತಿಗೆ ಪಾವತಿಸಬೇಕಿದೆ” ಎಂದು ಶಿಕ್ಷಕ ಮಹಮ್ಮದ್ ಆಝಮ್ ಅವರ ಪತ್ನಿ ರಝಿಯಾ ಆಝಮ್ ಹೇಳುತ್ತಾರೆ.
“ಕಳೆದ ಮೇ ತಿಂಗಳಲ್ಲಿ ಕೋವಿಡ್-19 ನಿಂದ ತನ್ನ ಪತಿ ಅಸು ನೀಗಿದ್ದಾರೆ. ಒಂದು ವೇಳೆ ಸರ್ಕಾರ ತನ್ನ ಪತಿಗೆ ನೀಡಬೇಕಾಗಿದ್ದ ಹಣವನ್ನು ಪಾವತಿ ಮಾಡಿದ್ದರೆ, ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುತ್ತಿದ್ದೆವು, ಬಹುಷ ಅವರು ಉಳಿದುಕೊಳ್ಳುತ್ತಿದ್ದರು” ಎಂದು ರಝಿಯಾ ಸರ್ಕಾರ ಬಾಕಿ ಪಾವತಿಸದ್ದರಿಂದ ತನ್ನ ಕುಟುಂಬಕ್ಕಾದ ಸಂಕಷ್ಟವನ್ನು indiaspend ನೊಂದಿಗೆ ಹಂಚಿಕೊಂಡಿದ್ದಾರೆ.
ಇದು ರಝಿಯಾ ಒಬ್ಬರ ಕತೆಯಲ್ಲ. ಉತ್ತರ ಪ್ರದೇಶದ ಸರ್ಕಾರಿ ಅನುದಾನಿತ ಮದರಸಾಗಳ ಬಹುತೇಕ ಶಿಕ್ಷಕರ ಕುಟುಂಬದ್ದು ಇದೇ ಕಣ್ಣೀರ ಕತೆ. ಸರ್ಕಾರ ವೇತನ ಪಾವತಿಸದ್ದರಿಂದ ಮದರಸಾ ಶಿಕ್ಷಕರ ಕುಟುಂಬಗಳಿಗೆ ತಮ್ಮ ಚಿಕಿತ್ಸಾ ಖರ್ಚು ಕೂಡಾ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ಪ್ರದೇಶ ಮದರಸಾ ಶಿಕ್ಷಕರ ಒಕ್ಕೂಟದ ಸಲಹೆಗಾರ ಅಹಮದ್ ಇದ್ರೀಸಿ ಹೇಳುತ್ತಾರೆ.
“ರಾಜ್ಯದಲ್ಲಿ ಸುಮಾರು 100 ಮದ್ರಸಾ ಶಿಕ್ಷಕರು [ಕೋವಿಡ್ -19 ಅಥವಾ ಇತರ ವೈದ್ಯಕೀಯ ಸಮಸ್ಯೆಗಳಿಂದ] ಸಾವನ್ನಪ್ಪಿದ್ದಾರೆ, ಹಣಕಾಸಿನ ಮುಗ್ಗಟ್ಟಿನಿಂದ ಅವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ. ನಾವು ಲಕ್ನೋ ಮತ್ತು ದೆಹಲಿಗೆ ಹೋಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದೇವೆ . ಕಳೆದ ಐದು ವರ್ಷಗಳಿಂದ ಸರ್ಕಾರ ನಮಗೆ ಆಶ್ವಾಸನೆಗಳನ್ನು ನೀಡುತ್ತಿದೆಯೇ ಹೊರತು ಬೇರೇನೂ ಮಾಡುತ್ತಿಲ್ಲ” ಎಂದು ಇದ್ರೀಸಿ ತಿಳಿಸಿದ್ದಾರೆ.
ಮದ್ರಸಾ ಶಿಕ್ಷಕರ ಕುಟುಂಬಗಳ ಕಣ್ಣೀರ ಕತೆ
ರಝಿಯಾ ಪತಿ ನಿಧನರಾದ ನಂತರ, ಸರ್ಕಾರ ರಝಿಯಾರನ್ನು ಮದ್ರಸಾ ಶಿಕ್ಷಕಿಯಾಗಿ ನೇಮಿಸಿದೆ, ಆದರೆ ರಝಿಯಾರಿಗೂ ಗೌರವಧನ ಸಿಕ್ಕಿಲ್ಲ. ಕೋವಿಡ್-19ರಿಂದ ಮೃತಪಟ್ಟವರ ಕುಟುಂಬಗಳಿಗೆ ಸುಪ್ರೀಂ ಕೋರ್ಟ್ ಘೋಷಿಸಿರುವ 50,000 ರೂಪಾಯಿ ಪರಿಹಾರ ಕೂಡಾ ತನಗೆ ದೊರೆತಿಲ್ಲ ಎಂದು ಇಬ್ಬರು ಹೆಣ್ಣು ಮಕ್ಕಳ ತಾಯಿ ರಝಿಯಾ ಹೇಳಿದ್ದಾರೆ.
ಅವರ ಒಬ್ಬ ಮಗಳು ನಾಲ್ಕನೇ ತರಗತಿಯಲ್ಲಿ ಮತ್ತು ಇನ್ನೊಬ್ಬರು ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ಒಂದು ವೇಳೆ ಗೌರವಧನ ಬಂದರೆ ಮಕ್ಕಳನ್ನು ನೋಡಿಕೊಳ್ಳಲು ಸಹಾಯವಾಗುತ್ತದೆ. "ಆದರೆ ನಾವು ಈ ಹಣವನ್ನು ಪಡೆಯುತ್ತೇವೆಯೇ ಎಂದು ನನಗೆ ಖಚಿತವಿಲ್ಲ" ಎಂದು ರಝಿಯಾ ಹೇಳಿದ್ದಾರೆ.
"ನಾನು ಮದ್ರಸಾದಲ್ಲಿ ಶಿಕ್ಷಕನಾಗಿ ಸೇರಿದಾಗ ನನಗೆ ತುಂಬಾ ಸಂತೋಷವಾಗಿತ್ತು. ಸರ್ಕಾರಿ ಉದ್ಯೋಗ ಪಡೆಯುವುದು ನನ್ನ ಕನಸಾಗಿತ್ತು. ಆದರೆ ಈಗ ನನಗೆ ಗೌರವ ಧನ ಸಿಗದೇ ಇರುವುದರಿಂದ ನನ್ನ ಕನಸು ಭಗ್ನಗೊಂಡಂತೆ ಕಾಣುತ್ತಿದೆ” ಎಂದು ಗೋರಖ್ಪುರದ ಇನ್ನೋರ್ವ ಮದರಸಾ ಶಿಕ್ಷಕ ಆಸಿಫ್ ಮೆಹಮೂದ್ ಹೇಳಿದ್ದಾರೆ. ಮೆಹಮೂದ್ ಅವರ ಮಗನಿಗೆ ಥಲಸ್ಸೆಮಿಯಾಕ್ಕೆ ರಕ್ತ ವರ್ಗಾವಣೆಯ ಅಗತ್ಯವಿದೆ. “ಪ್ರತಿ ಎರಡು ತಿಂಗಳಿಗೊಮ್ಮೆ ಮೂರು ಬಾರಿಯಂತೆ ಚಿಕಿತ್ಸೆಯ ಅಗತ್ಯ ಇದೆ. ಪ್ರತಿ ಬಾರಿ 2,000-ರೂ. 3,000 ವೆಚ್ಚವಾಗುತ್ತದೆ. ಕಳೆದ 57 ತಿಂಗಳಿಂದ ನನಗೆ ಗೌರವ ಧನ ಸಿಕ್ಕಿಲ್ಲ. ನನ್ನ ಮಗನ ಚಿಕಿತ್ಸೆಯನ್ನು ನಾನು ಹೇಗೆ ಭರಿಸಲಿ” ಎಂದು ಅವರು ಅವಲತ್ತುಕೊಳ್ಳುತ್ತಾರೆ.

ಉತ್ತರ ಪ್ರದೇಶದಲ್ಲಿ, ಮದ್ರಸಾಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸರ್ಕಾರಿ ಕಾರ್ಯಕ್ರಮದ ಯೋಜನೆಯು 8,584 ಮದರಸಾಗಳನ್ನು ಒಳಗೊಂಡಿದೆ, ಮಕ್ಕಳಿಗೆ ಹಿಂದಿ, ಗಣಿತ, ಇಂಗ್ಲಿಷ್, ಸಮಾಜ ವಿಜ್ಞಾನ, ಕಂಪ್ಯೂಟರ್ ಮತ್ತು ವಿಜ್ಞಾನವನ್ನು ಕಲಿಸುವ 25,550 ಶಿಕ್ಷಕರನ್ನು ಈ ಯೋಜನೆಯಡಿಯಲ್ಲಿ ನೇಮಿಸಲಾಗಿದೆ.
ಮದರಸಾಗಳಲ್ಲಿ ಓದುತ್ತಿರುವ ಮಕ್ಕಳು ಆಧುನಿಕ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಯೋಜನೆಯನ್ನು 1993 ರಲ್ಲಿ ಪ್ರಾರಂಭಿಸಲಾಯಿತು. ಆದರೆ, ಪ್ರಸ್ತುತ ಸರ್ಕಾರವು ತನ್ನ ಜವಾಬ್ದಾರಿಯನ್ನು ತ್ಯಜಿಸುವುದರೊಂದಿಗೆ, ಸದುದ್ದೇಶದ ಶಿಕ್ಷಣ ವ್ಯವಸ್ಥೆಯು ಪತನದ ಅಂಚಿನಲ್ಲಿದೆ.
"ನಮ್ಮದು ಐದು ಜನರ ಕುಟುಂಬ, ಅದರಲ್ಲಿ ನಾನು ಮಾತ್ರ ಉದ್ಯೋಗ ಮಾಡುವ ಏಕೈಕ ಸದಸ್ಯ. ಜೀವನ ನಿರ್ವಹಣೆಗೆ ಸಾಲ ಮಾಡಿಕೊಂಡಿದ್ದೆ. ನಾವು ಗೌರವಧನವನ್ನು ಸ್ವೀಕರಿಸದ ಕಾರಣ, ನಾನು ಟ್ಯೂಷನ್ ತರಗತಿಗಳನ್ನು ಸಹ ನಡೆಸುತ್ತಿದ್ದೇನೆ ”ಎಂದು ಗೋರಖ್ಪುರದ ಪಾದ್ರಿ ಬಜಾರ್ ಪ್ರದೇಶದ ಮದ್ರಸಾದ ಶಿಕ್ಷಕ ಮೊಹಮ್ಮದ್ ಅಕಿಬ್ ಅನ್ಸಾರಿ ಹೇಳಿದ್ದಾರೆ. “ಕೋವಿಡ್ -19 ನಿಂದಾಗಿ ಎಲ್ಲವೂ ನಿಂತುಹೋಗಿದೆ. ಗೌರವಧನ ಬಂದ ತಕ್ಷಣ ವಾಪಸ್ ಕೊಡುತ್ತೇನೆ ಎಂದು ಆಶ್ವಾಸನೆ ನೀಡಿ ಸ್ನೇಹಿತರೊಬ್ಬರ ಬಳಿ ಮತ್ತೊಂದು ಸಾಲ ಪಡೆದಿದ್ದೇನೆ. ಸದ್ಯ ನಾನು 5 ಲಕ್ಷ ಸಾಲ ಹೊಂದಿದ್ದೇನೆ” ಎಂದು ಆಕಿಬ್ ತಮಗೆ ಬರಬೇಕಾದ ಗೌರವಧನ ಬರದಿದ್ದುದರಿಂದ ಉಂಟಾದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.
2017 ರಲ್ಲಿ, ಮದರಸಾಗಳ ಕಾರ್ಯನಿರ್ವಹಣೆಯಲ್ಲಿ ಕೆಲವು ಅಕ್ರಮಗಳ ನಡೆದ ಆರೋಪದ ಮೇಲೆ, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಕೆಲವು ಮದರಸಾ ನಿರ್ವಹಕರಿಗೆ ಪರಿಹಾರ ಹಣವನ್ನು ನೀಡುವುದನ್ನು ನಿಲ್ಲಿಸಿತು. ನಂತರ, ಪಾರದರ್ಶಕತೆಗಾಗಿ, ಸರ್ಕಾರವು ಮದ್ರಸಾ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು, ಅದಕ್ಕೆ ಎಲ್ಲಾ ಮದರಸಾಗಳು ಮದ್ರಸಾದಲ್ಲಿ ನೇಮಕಗೊಂಡ ಶಿಕ್ಷಕರು ಮತ್ತು ದಾಖಲಾದ ವಿದ್ಯಾರ್ಥಿಗಳ ಸಂಬಂಧಿತ ವಿವರಗಳನ್ನು ಅಪ್ಲೋಡ್ ಮಾಡಬೇಕಾಗಿತ್ತು. ನಕಲು ಮಾಡುವುದನ್ನು ತಡೆಯಲು ತನಿಖೆಯ ನಂತರ, ಸರ್ಕಾರವು ಗೌರವಧನವನ್ನು ಪಾವತಿಸುತ್ತದೆ ಹಾಗೂ ಪಾವತಿಗಳನ್ನು ಕ್ರಮಬದ್ಧಗೊಳಿಸುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ ಹಾಗೆ ಏನೂ ಸಂಭವಿಸಿಲ್ಲ.
"ಅಧಿಕಾರಿಗಳು ವರ್ಷಕ್ಕೆ ಎರಡು ಬಾರಿ ಮದ್ರಸಾವನ್ನು ಪರಿಶೀಲಿಸುತ್ತಾರೆ" ಎಂದು ಇನ್ನೊಬ್ಬ ಮದ್ರಸಾ ಶಿಕ್ಷಕ ಫೈಝಾನ್ ಸರ್ವರ್ ಹೇಳಿದ್ದಾರೆ. "ಶಿಕ್ಷಕರು, ಮದ್ರಸಾಗಳು ಮತ್ತು ಶಿಕ್ಷಣದ ಗುಣಮಟ್ಟವನ್ನು ನಿರ್ಣಯಿಸಲು ಅಧಿಕಾರಿಗಳು ಮದರಸಾಗಳಿಗೆ ಭೇಟಿ ನೀಡುತ್ತಾರೆ. ಆದರೆ, ನಮಗೆ ಗೌರವಧನ ಸಿಗದೇ ಇರುವುದರ ಹಿಂದಿನ ಕಾರಣವನ್ನು ಯಾರೂ ಹೇಳುತ್ತಿಲ್ಲ. ಹೆಚ್ಚಿನ ಶಿಕ್ಷಕರು 40 ವರ್ಷಕ್ಕಿಂತ ಮೇಲ್ಪಟ್ಟವರು. ಈಗ ನಮಗೆ ಬೇರೆಲ್ಲಿ ಕೆಲಸ ಸಿಗುತ್ತದೆ? ಸರ್ಕಾರ ನಮ್ಮನ್ನು ಏಕೆ ಈ ಪರಿಸ್ಥಿತಿಗೆ ತಳ್ಳುತ್ತಿದೆ ಎಂದು ನಮಗೆ ತಿಳಿದಿಲ್ಲ” ಎಂದು ಫೈಝಾನ್ ಅಳಲು ತೋಡಿಕೊಳ್ಳುತ್ತಾರೆ.
“ಕಳೆದ ಐದು ವರ್ಷಗಳಿಂದ ಸರ್ಕಾರವು ಮದರಸಾಗಳನ್ನು ಪರಿಶೀಲಿಸಿದೆ, ಮದರಸಾಗಳಿಗೆ ಭೌತಿಕವಾಗಿ ಭೇಟಿ ನೀಡಿದೆ, ಅನೇಕ ತನಿಖೆಗಳು ನಡೆದಿವೆ. ಮದರಸಾಗಳಿಗೆ ಸಂಬಂಧಿತ ಎಲ್ಲಾ ಮಾಹಿತಿಯನ್ನು ತಮ್ಮ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ” ಎಂದು ಯುಪಿ ಮದರಸಾ ಅಧುನಿಕ್ ಶಿಕ್ಷಕ ಏಕತಾ ಸಮಿತಿಯ ಅಧ್ಯಕ್ಷ ಅಶ್ರಫ್ ಅಲಿ ಹೇಳಿದ್ದಾರೆ. "ಜನವರಿ 2022 ರಿಂದ ನಾವು ಸಕಾಲಿಕವಾಗಿ ಗೌರವಧನವನ್ನು ಸ್ವೀಕರಿಸುತ್ತೇವೆ ಎಂದು ಅಧಿಕಾರಿಗಳು ನಮಗೆ ಭರವಸೆ ನೀಡಿದ್ದಾರೆ" ಎಂದು ಅಲಿ ಹೇಳಿದ್ದಾರೆ.
ಆದರೆ ಸರ್ಕಾರ ತರಾತುರಿಯಾಗಿ ಮದರಸಾ ಶಿಕ್ಷಕರ ಬೇಡಿಕೆ ಈಡೇರಿಸಲು ಮುಂದಾಗಿರುವುದು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳ ಪರಿಣಾಮವಾಗಿದೆ. ನಾವು ಪ್ರತಿಭಟಿಸದೇ ಇದ್ದಿದ್ದರೆ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸುತ್ತಿತ್ತು ಎಂದು ಅಲಿ ಹೇಳಿದ್ದಾರೆ.
ಮದರಸಾ ಶಿಕ್ಷಣದ ಆಧುನೀಕರಣ ಯೋಜನೆ
ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅನುಕೂಲವಾಗುವಂತೆ, ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಮದ್ರಸಾ ಆಧುನೀಕರಣ ಯೋಜನೆಯನ್ನು ಪ್ರಾರಂಭಿಸಿದೆ. ಹಿಂದಿ, ಇಂಗ್ಲಿಷ್, ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ಸೇರಿದಂತೆ ಆಧುನಿಕ ವಿಷಯಗಳನ್ನು ದಾರ್-ಉಲ್-ಉಲೂಮ್, ಮಕ್ತಬ್ಗಳು ಮತ್ತು ಮದರಸಾಗಳಂತಹ ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಲಾಗುತ್ತದೆ.
ಸರ್ಕಾರವು 2008 ರಲ್ಲಿ ಈ ಯೋಜನೆಯನ್ನು ವಿಸ್ತರಿಸಿದ್ದು, ಮದರಸಾಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಯೋಜನೆ ಎಂದು ಇದನ್ನು ಕರೆದಿತ್ತು. ಶಿಕ್ಷಕರು ಪದವೀಧರರಾಗಿದ್ದರೆ ಮಾಸಿಕ 6,000 ರೂ. ಮತ್ತು ಸ್ನಾತಕೋತ್ತರ ಪದವೀಧರರಾಗಿದ್ದರೆ ಅಥವಾ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ 12,000 ರೂ.ಗಳನ್ನು ಮಾಸಿಕ ಗೌರವಧನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ನಿರ್ಧರಿಸಿತ್ತು.
2016 ರಲ್ಲಿ, ಉತ್ತರ ಪ್ರದೇಶ ಸರ್ಕಾರವು ಪದವೀಧರ ಶಿಕ್ಷಕರಿಗೆ ಹೆಚ್ಚುವರಿಯಾಗಿ 2,000 ರೂ.ಗಳನ್ನು ಪಾವತಿಸುವುದಾಗಿ ಘೋಷಿಸಿತು, ಇದು ತಿಂಗಳಿಗೆ ರೂ.8,000 ಮತ್ತು ಸ್ನಾತಕೋತ್ತರ ಮತ್ತು ಬಿಎಡ್ ಶಿಕ್ಷಕರಿಗೆ ರೂ.3,000 ಹೆಚ್ಚುವರಿ ಪಾವತಿಸಿ ಒಟ್ಟು ತಿಂಗಳಿಗೆ ರೂ.15,000 ಪಾವತಿಸುವುದಾಗಿ ಘೋಷಿಸಿತ್ತು.
2018 ರಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚವನ್ನು ವಿಭಜಿಸಲು ನಿರ್ಧರಿಸಿದವು. ಅದರಂತೆ, ಕೇಂದ್ರ ಸರ್ಕಾರವು 60% ಗೌರವಧನವನ್ನು ಪಾವತಿಸಬೇಕಾದರೆ ರಾಜ್ಯವು 40% ಪಾವತಿಸುತ್ತದೆ. 2021-22 ರಲ್ಲಿ, ಶಿಕ್ಷಣ ಸಚಿವಾಲಯವು ಈ ಯೋಜನೆಯನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಹಸ್ತಾಂತರಿಸಿದೆ.

“ಸರಕಾರದ ಯೋಜನಾ ಅನುಮೋದನೆ ಮಂಡಳಿಯು ಮದರಸಾ ಶಿಕ್ಷಕರಿಗೆ ನೀಡುವ ಗೌರವಧನವನ್ನು ಮಂಜೂರು ಮಾಡಿದೆ. ಇದು ಬಿಡುಗಡೆಯ ಪ್ರಕ್ರಿಯೆಯಲ್ಲಿದೆ. ಅದು ಈಗ ಯಾವುದೇ ಸಮಯದಲ್ಲಿ ಬಿಡುಗಡೆಯಾಗುತ್ತದೆ. ಬಜೆಟ್ ಅನುಮೋದನೆಯ ನಂತರವೇ ನಾವು ಮೊತ್ತವನ್ನು ತಿಳಿಯುತ್ತೇವೆ” ಎಂದು ಉತ್ತರ ಪ್ರದೇಶ ಮದ್ರಸಾ ಶಿಕ್ಷಣ ಮಂಡಳಿಯ ಜಂಟಿ ನಿರ್ದೇಶಕ ಆರ್ಪಿ ಸಿಂಗ್ IndiaSpend ಗೆ ತಿಳಿಸಿದ್ದಾರೆ.
ಬಾಕಿಯನ್ನು ಪಾವತಿಸುವಲ್ಲಿ ಕೇಂದ್ರ ಸರ್ಕಾರದ ವಿಳಂಬದ ಬಗ್ಗೆ ಕೇಳಿದಾಗ, “ಬಾಕಿ ಇರುವ ಮೊತ್ತವು ದೊಡ್ಡದಾಗಿದೆ. ಹಾಗಾಗಿ ಅದನ್ನು ಒಂದೇ ಬಾರಿಗೆ ಬಿಡುಗಡೆ ಮಾಡಲಾಗುವುದಿಲ್ಲ. ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಿದೆ. ಇದುವರೆಗೂ ನಾವು ಎಷ್ಟು ಪತ್ರಗಳನ್ನು ಬರೆದಿದ್ದೇವೆ ಎಂದು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ.” ಎಂದು ಸಿಂಗ್ ತಿಳಿಸಿದ್ದಾರೆ.
ಹೊಸ ನೇಮಕಾತಿಗೆ ಸರ್ಕಾರ ಸಜ್ಜು:
ಬಾಕಿ ಇರುವ ಗೌರವಧನವನ್ನು ಸರ್ಕಾರ ಇನ್ನೂ ನೀಡದಿದ್ದರೂ, ಹೊಸ ನೇಮಕಾತಿಗಾಗಿ ಜಾಹೀರಾತುಗಳನ್ನು ಪ್ರಕಟಿಸಲು ಸರ್ಕಾರ ಆದೇಶವನ್ನು ನೀಡಿದೆ.
ಬಿಜ್ನೋರ್ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಹೊಸ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪತ್ರವನ್ನು ನೀಡಿದ್ದಾರೆ ಎಂದು ಮದರಸಾ ಆಧುನಿಕರಣ ಶಾಯಕ ಏಕತಾ ಸಮಿತಿಯ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಇರ್ಫಾನ್ ಖಾನ್ ತಿಳಿಸಿದ್ದಾರೆ.
ಹೊಸ ಮಾರ್ಗಸೂಚಿಯಂತೆ ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನೆಗೆ ಗರಿಷ್ಠ ಮೂವರು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
"ಕಳೆದ ಐದು ವರ್ಷಗಳಿಂದ, ನಾವು ಪ್ರತಿಭಟನೆಗಳನ್ನು ನಡೆಸುತ್ತಿದ್ದೇವೆ ಮತ್ತು ಬಾಕಿ ಪಾವತಿಸಲು ಪ್ರಯತ್ನಿಸುತ್ತಿದ್ದೇವೆ. ನಮಗೆ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ. ಹೀಗಿರುವಾಗ ಹೊಸ ಶಿಕ್ಷಕರನ್ನು ಏಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ? ಗೌರವಧನ ಪಾವತಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಎಲ್ಲಾ ಬಾಕಿಗಳನ್ನು ಪಾವತಿಸಿ ಯೋಜನೆಯನ್ನು ಸ್ಥಗಿತಗೊಳಿಸಬೇಕು” ಎಂದು ಇರ್ಫಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಪೆ: indiaspend.com, scroll.in







