ಕುಪ್ಪೆಪದವು: ಡಿಜಿಟಲ್ ಗ್ರಂಥಾಲಯ, ಪುಸ್ತಕ ಗೂಡು ಉದ್ಘಾಟನೆ

ಮಂಗಳೂರು, ಜ.31: ಕುಪ್ಪೆಪದವು ಗ್ರಾಪಂನಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಪುಸ್ತಕ ಗೂಡುವನ್ನು ಸೋಮವಾರ ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟಿಸಿದರು. ಅಲ್ಲದೆ ‘ಸ್ವಚ್ಛತಾ ಬಿತ್ತಿಪತ್ರ’ವನ್ನು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ನಮ್ಮ ಜೀವನ ಪದ್ಧತಿ ‘ಅಪ್ ಟು ಡೇಟ್’ ಮಾಡಿಕೊಳ್ಳುವ ದೆಸೆಯಲ್ಲಿ ಡಿಜಿಟಲ್ ಮಾಧ್ಯಮ ನೆರವಾಗಲಿದೆ. ಓದುವ ಹವ್ಯಾಸ ರೂಢಿಸಿಕೊಂಡಲ್ಲಿ, ಸುತ್ತಲ ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದರು.
ಗ್ರಾಪಂ ಅಧ್ಯಕ್ಷ ಡಿಪಿ ಹಮ್ಮಬ್ಬ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ ಸಹಕರಿಸಿದ ಅನಂತ ಕೇಸರಿ ಕಟ್ಟೆಮಾರ್, ಶೀ ದುರ್ಗೇಶ್ವರಿ ದೇವಿ ದೇವಸ್ಥಾನದ ಮ್ಯಾನೆಜಿಂಗ್ ಟ್ರಸ್ಟಿ ಪ್ರವೀಣ್ ಕುಮಾರ್ ಅಗರಿ, ಬಸ್ ಮಾಲಕ ನಾರಾಯಣ ಪಿಎಂ, ಅಜಿತ್ ಕುಮಾರ್ ಜೈನ್ ಮತ್ತಿತರರನ್ನು ಸನ್ಮಾನಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ವಿಮಲಾ, ಸದಸ್ಯರಾದ ನಿತೇಶ್, ಪುಷ್ಪಾ, ಮಂಜುಳಾ, ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ಗಾಯತ್ರಿ, ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಪಂ ಪಿಡಿಒ ಸವಿತಾ ಮಂದೋಲಿಕರ್ ಸ್ವಾಗತಿಸಿದರು. ಕಾರ್ಯದರ್ಶಿ ಇಸ್ಮಾಯೀಲ್ ಎಂಎಸ್ ಕಾರ್ಯಕ್ರಮ ನಿರೂಪಿಸಿದರು.





