ನಂಜನಗೂಡು: ಗ್ರಾಮಸಭೆಯಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ; ಇಬ್ಬರಿಗೆ ಗಂಭೀರ ಗಾಯ

ಮೈಸೂರು,ಜ.31: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಾಡ್ಯ ಗ್ರಾ.ಪಂ. ಗ್ರಾಮಸಭೆಯಲ್ಲಿ ಎರಡು ಗುಂಪುಗಳ ಮಧ್ಯೆ ಮನೆ ಹಂಚಿಕೆ ವಿಚಾರಕ್ಕೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಮಾರಾ ಮಾರಿ ನಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡು ಹತ್ತುಕ್ಕೂ ಹೆಚ್ಚು ಮಂದಿ ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ನಡೆದಿದೆ.
ಹಾಡ್ಯ ಗ್ರಾ.ಪಂ. ಅಧ್ಯಕ್ಷೆ ಮಹದೇವಮ್ಮ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಗ್ರಾಮಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಬಿಜೆಪಿ ಮುಖಂಡ ವೀರಭದ್ರಪ್ಪ ಮತ್ತು ಕಾಂಗ್ರೆಸ್ ಮುಖಂಡ ರಾಜೂ ನಡುವೆ ಮನೆ ಹಂಚಿಕೆ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಮಾರಾ ಮಾರಿ ನೆಡೆದಿದೆ. ಈ ವೇಳೆ ಕಲ್ಲುಗಳಿಂದ ಹೊಡೆದ ಪರಿಣಾಮ ಕಂದೇಗಾಲ ಗ್ರಾಮದ ರಾಜಶೇಖರ್ ಮತ್ತು ಹಾಡ್ಯ ಗ್ರಾಮದ ಗಣೇಶ್ ಅವರ ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ಹುಲ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಯಿತು ಎಂದು ತಿಳಿದು ಬಂದಿದೆ.
ಹಾಡ್ಯ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರಿಯಪ್ಪ ಅವರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಗಾಯಾಳುಗಳು ಹುಲ್ಲಹಳ್ಳಿ ಪೊಲೀಸು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.





