2022-23ರಲ್ಲಿ ಶೇ.8-8.5ರಷ್ಟು ಜಿಡಿಪಿ ಬೆಳವಣಿಗೆ: ಆರ್ಥಿಕ ಸಮೀಕ್ಷೆಯ ಮುನ್ನಂದಾಜು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜ.31: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ.9.2ರ ದರದಲ್ಲಿ ಬೆಳೆಯುತ್ತಿದೆ ಎಂದು ಹೇಳಿರುವ ಆರ್ಥಿಕ ಸಮೀಕ್ಷೆ ವರದಿಯು,2022-23ನೇ ಸಾಲಿನಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಶೇ.8ರಿಂದ ಶೇ.8.5ರಷ್ಟು ಇರಲಿದೆ ಎಂದು ಮುನ್ನಂದಾಜಿಸಿದೆ. ಬಜೆಟ್ ಅಧಿವೇಶನದ ಮೊದಲ ದಿನವಾದ ಸೋಮವಾರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2021-22ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿಯನ್ನು ಮಂಡಿಸಿದರು.
ವ್ಯಾಪಕ ಲಸಿಕೆ ನೀಡಿಕೆ,ಪೂರೈಕೆ ಕಡೆಯ ಸುಧಾರಣೆಗಳಿಂದ ಲಾಭಗಳು ಮತ್ತು ನಿಯಮಗಳ ಸಡಿಲಿಕೆ,ಸದೃಢ ರಫ್ತು ಬೆಳವಣಿಗೆ ಮತ್ತು ಬಂಡವಾಳ ವೆಚ್ಚವನ್ನು ಹೆಚ್ಚಿಸಲು ವಿತ್ತೀಯ ಲಭ್ಯತೆ ಇವು 2022-23ರಲ್ಲಿ ಜಿಡಿಪಿ ಬೆಳವಣಿಗೆಯನ್ನು ಬೆಂಬಲಿಸಲಿವೆ. ಹಣಕಾಸು ವ್ಯವಸ್ಥೆಯು ಆರ್ಥಿಕ ಚೇತರಿಕೆಗೆ ಬೆಂಬಲವನ್ನು ಒದಗಿಸಲು ಉತ್ತಮ ಸ್ಥಿತಿಯಲ್ಲಿರುವುದರಿಂದ ಮುಂದಿನ ವರ್ಷವೂ ಖಾಸಗಿ ಕೇತ್ರ ಹೂಡಿಕೆಗಳು ಹೆಚ್ಚಲು ಪ್ರಶಸ್ತವಾಗಿದೆ ಎಂದು ಆರ್ಥಿಕ ಸಮೀಕ್ಷೆ ವರದಿಯು 2022-23ನೇ ಸಾಲಿಗೆ ಬೆಳವಣಿಗೆಯ ಮುನ್ನೋಟದಲ್ಲಿ ತಿಳಿಸಿದೆ.
ಆರ್ಥಿಕ ಸಮೀಕ್ಷೆಯ ಮುನ್ನಂದಾಜು ಎಚ್ಚರಿಕೆಯೊಂದಿಗೆ ತಳುಕು ಹಾಕಿಕೊಂಡಿದೆ.
ಆರ್ಥಿಕತೆಯನ್ನು ಇನ್ನಷ್ಟು ದುರ್ಬಲಗೊಳಿಸುವ ಸಾಕ್ರಾಮಿಕ ಸಂಬಂಧಿತ ಆರ್ಥಿಕ ಅಡೆತಡೆಗಳಿರುವುದಿಲ್ಲ,ವಾಡಿಕೆಯಂತೆ ಮಳೆಯಾಗಲಿದೆ, ಪ್ರಮುಖ ಸೆಂಟ್ರಲ್ ಬ್ಯಾಂಕುಗಳಿಂದ ಜಾಗತಿಕ ದ್ರವ್ಯತೆಯ ಹಿಂದೆಗೆದುಕೊಳ್ಳುವಿಕೆಯು ಹೆಚ್ಚು ಕ್ರಮಬದ್ಧವಾಗಿರುತ್ತದೆ,ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್ ಗೆ 70 ಡಾ. ಮತ್ತು 75 ಡಾ.ನಡುವೆ ಇರಲಿವೆ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳು ವರ್ಷದ ಅವಧಿಯಲ್ಲಿ ಕ್ರಮೇಣ ನಿವಾರಣೆಯಾಗಲಿವೆ ಎಂಬ ಗ್ರಹಿಕೆಗಳನ್ನು ಈ ಮುನ್ನಂದಾಜು ಆಧರಿಸಿದೆ ಎಂದು ವರದಿಯು ತಿಳಿಸಿದೆ. 2022-23ರಲ್ಲಿ ಭಾರತದ ನೈಜ ಜಿಡಿಪಿ ಬೆಳವಣಿಗೆ ಶೇ.8.7 ಮತ್ತು ಶೇ.7.5ರಷ್ಟು ಇರಲಿದೆ ಎಂದು ಅನುಕ್ರಮವಾಗಿ ವಿಶ್ವ ಬ್ಯಾಂಕ್ ಮತ್ತು ಏಶ್ಯನ್ ಅಭಿವೃದ್ಧಿ ಬ್ಯಾಂಕ್ ಇತ್ತೀಚಿಗೆ ಭವಿಷ್ಯ ನುಡಿದಿದ್ದವು.
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜ.25ರಂದು ಬಿಡುಗಡೆಗೊಳಿಸಿದ ತನ್ನ ಇತ್ತೀಚಿನ ವಿಶ್ವ ಆರ್ಥಿಕ ಮುನ್ನೋಟದಲ್ಲಿ ಭಾರತದ ನೈಜ ಜಿಡಿಪಿ ಬೆಳವಣಿಗೆ ದರ 2021-22 ಮತ್ತು 2022-23ನೇ ಸಾಲುಗಳಿಗೆ ಶೇ.9 ಮತ್ತು 2023-24ರಲ್ಲಿ ಶೇ.7.1ರಷ್ಟು ಇರಲಿದೆ ಎಂದು ಅಂದಾಜಿಸಿದೆ.
ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು
► ಭಾರತೀಯ ಆರ್ಥಿಕತೆಯು ಶೇ.8-8.5 ಜಿಡಿಪಿ ಬೆಳವಣಿಗೆಯನ್ನು ಸಾಧಿಸುವ ಉತ್ತಮ ಸ್ಥಿತಿಯಲ್ಲಿದೆ.
► 2022-23ರಲ್ಲಿ ಸವಾಲುಗಳನ್ನು ಎದುರಿಸಲು ಆರ್ಥಿಕತೆಯು ಸದೃಢವಾಗಿದೆ.
►ಸಾಂಕ್ರಾಮಿಕದಿಂದ ಪೀಡಿತವಾಗಿದ್ದ 2021ನೇ ಹಣಕಾಸು ವರ್ಷದಲ್ಲಿ ಕೊರತೆ ಮತ್ತು ಸಾಲ ಸೂಚಕಗಳ ಏರಿಕೆಯ ನಂತರ ಸರಕಾರಿ ಹಣಕಾಸುಗಳು 2021-22ರಲ್ಲಿ ಕ್ರೋಡೀಕರಣಕ್ಕೆ ಸಾಕ್ಷಿಯಾಗಲಿವೆ.
►ಹಣಕಾಸು ವ್ಯವಸ್ಥೆಯು ಆರ್ಥಿಕ ಚೇತರಿಕೆಗೆ ಬೆಂಬಲವನ್ನು ಒದಗಿಸಲು ಉತ್ತಮ ಸ್ಥಿತಿಯಲ್ಲಿರುವುದರಿಂದ ಖಾಸಗಿ ಕ್ಷೇತ್ರ ಹೂಡಿಕೆಗಳು ಹೆಚ್ಚಲಿವೆ. *ಸದೃಢ ರಫ್ತು ಬೆಳವಣಿಗೆ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಪ್ರಗತಿಯನ್ನು ಬೆಂಬಲಿಸಲು ಬಂಡವಾಳ ವೆಚ್ಚವನ್ನು ಹೆಚ್ಚಿಸಲು ವಿತ್ತೀಯ ಲಭ್ಯತೆ.







